ಕಂಪನಿ : ಹಲವರು ಸೇರಿ ರಚಿಸಿಕೊಂಡ, ತನ್ನ ಸದಸ್ಯರಿಗೆ ಇರುವವಕ್ಕಿಂತ ಪ್ರತ್ಯೇಕವಾದ ಸ್ವತ್ತನ್ನೂ ಅಧಿಕಾರಗಳನ್ನೂ ಹೊಣೆಗಳನ್ನೂ ಪಡೆದಿರುವ ವಿಧಿಯುಕ್ತ ಸಂಸ್ಥೆ. ಸೈನ್ಯದಲ್ಲಿ ಒಬ್ಬ ಕ್ಯಾಪ್ಟನ್ನನ ಅಥವಾ ಮೇಜರನ ಆಡಳಿತದಲ್ಲಿರುವ ದಳವನ್ನು ಕಂಪನಿ ಎಂದು ಕರೆಯುವರಾದರೂ ಸಾಮಾನ್ಯ ಪರಿಭಾಷೆಯಲ್ಲಿ ಈ ಶಬ್ದವನ್ನು ಮೇಲೆ ತಿಳಿಸಿದ ಅರ್ಥದಲ್ಲಿ ಬಳಸಲಾಗುತ್ತಿದೆ. ಆಧುನಿಕ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ಕಂಪನಿಗಳು. ಅಮೆರಿಕದಲ್ಲಿ ಇವಕ್ಕೆ ಕಾರ್ಪೊರೇಷನುಗಳೆಂದು ಹೆಸರು. ವಾಣಿಜ್ಯೇತರ ಉದ್ದೇಶಗಳಿಗಾಗಿ ಸ್ಥಾಪಿತವಾದ ಸಂಸ್ಥೆಗಳನ್ನು ಭಾರತದಲ್ಲೂ ಬ್ರಿಟನ್ನಿನಲ್ಲೂ ಕಾರ್ಪೊರೇಷನ್ ಎಂದು ಕರೆಯಲಾಗುತ್ತದೆ (ನೋಡಿ-ಕಾರ್ಪೊರೇಷನ್). ಆದರೆ ಈ ಎರಡು ಪದಗಳೂ ಸಮಾನಾರ್ಥಕಗಳೆಂಬಂತೆ ರೂಢಿಯಲ್ಲಿವೆ.

 ಇಂಗ್ಲೆಂಡಿನಲ್ಲಿ 
ಆಧುನಿಕ ವ್ಯವಹಾರ ಪ್ರಪಂಚದಲ್ಲಿ ಕಂಪನಿಯ ವ್ಯವಸ್ಥೆ ಬಹಳ ಮುಖ್ಯವಾದದ್ದು. ಇದು ಪಾಶ್ಚಾತ್ಯರಿಂದ ಭಾರತಕ್ಕೆ ಬಂದದ್ದು. ಬ್ರಿಟನಿನಲ್ಲಿ ಈ ಬಗೆಯ ಸಂಸ್ಥೆಗಳು ಅನೇಕ ಶತಮಾನಗಳಿಂದ ಬೆಳೆದುಬಂದಿವೆ. ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದು, ಇಲ್ಲಿ ತನ್ನ ಆಡಳಿತವನ್ನು ಸ್ಥಾಪಿಸಿದ ಈಸ್ಟ್‌ ಇಂಡಿಯ ಕಂಪನಿ (ನೋಡಿ-ಈಸ್ಟ್‌-ಇಂಡಿಯ-ಕಂಪನಿ) ಇಂಥ ಒಂದು ಹಳೆಯ ಸಂಸ್ಥೆ (1600). ಇಂಥ ಸಂಸ್ಥೆಗಳು ವ್ಯವಹಾರ ನಡೆಸುವ ಉದ್ದೇಶದಿಂದ ಆ ಕಾಲದಲ್ಲಿ ಬ್ರಿಟಿಷ್ ರಾಜರಿಂದ ವಿಶೇಷ ಸನ್ನದುಗಳನ್ನು ಪಡೆದಿದ್ದುವು. ಇವು ಯಾವ ಬಗೆಯ ವ್ಯಾಪಾರ ಬೇಕಾದರೂ ಮಾಡಬಹುದಿತ್ತು. ಈ ವಿಚಾರದಲ್ಲಿ ಇವಕ್ಕೆ ಯಾವ ಕಟ್ಟುಪಾಡೂ ಇರಲಿಲ್ಲ. ಇವುಗಳ ವ್ಯವಹಾರದಿಂದ ನಷ್ಟವೇನಾದರೂ ಸಂಭವಿಸಿದರೆ, ಇವುಗಳಿಂದ ಇತರರಿಗೆ ಸಲ್ಲಬೇಕಾದ ಸಾಲಗಳಿಗೆ ಸದಸ್ಯರು ಬಾಧ್ಯರಾಗುತ್ತಿರಲಿಲ್ಲ. ಈ ಕಾರಣದಿಂದ ಇಂಥ ಸಂಸ್ಥೆಗಳ ಮೇಲೆ ಆ ಕಾಲದಲ್ಲಿ ನಾನಾ ಬಗೆಯ ದೂರುಗಳು ಬರುತ್ತಿದ್ದುವು. ಇವುಗಳ ಸ್ವೇಚ್ಛೆಯ ವರ್ತನೆಯಿಂದ ಈ ಸಂಸ್ಥೆಗಳ ಸದಸ್ಯರ ಹಾಗೂ ಸಾಲಗಾರರ ಹಿತಗಳಿಗೆ ಧಕ್ಕೆ ಒದಗುತ್ತಿದೆಯೆಂದು ಅನೇಕರು ಆಕ್ಷೇಪಿಸುತ್ತಿದ್ದರು.

17-18ನೆಯ ಶತಮಾನಗಳಲ್ಲಿ ಸರ್ಕಾರದ ನೋಂದಣಿಯನ್ನು ಪಡೆಯದೆಯೇ ಅನೇಕ ಕಂಪನಿಗಳು ಇಂಗ್ಲೆಂಡಿನಲ್ಲಿ ಹುಟ್ಟಿಕೊಂಡುವು. ಇವುಗಳ ಬಂಡವಾಳ ಭಾಗಗಳನ್ನು-ಷೇರುಗಳನ್ನು-ಹೊಂದಿದ್ದ ಸದಸ್ಯರು ಈ ಷೇರುಗಳನ್ನು ಇತರರಿಗೆ ವರ್ಗಾಯಿಸಬಹುದಾಗಿತ್ತು. ಇಂಥ ಸಂಸ್ಥೆಗಳು ಶಾಸನಬದ್ಧವಾಗಿಲ್ಲದಿದ್ದುದರಿಂದ ಇವು ಜನರಲ್ಲಿ ಬಹಳ ಅಪ್ರಿಯವಾದುವು. ಇವುಗಳ ಮೇಲೆ ಸರ್ಕಾರದ ಹತೋಟಿ ಇರಲಿಲ್ಲವಾದುದರಿಂದ ಇವುಗಳಿಂದ ಅನೇಕರು ಮೋಸ ಹೋದರು. ಆದ್ದರಿಂದ ಇವನ್ನು ಹತೋಟಿಗೆ ಒಳಪಡಿಸಲು ಅನೇಕ ಕಾಯಿದೆಗಳು ಕ್ರಮೇಣ ಜಾರಿಗೆ ಬಂದುವು. ಕಂಪನಿಗಳು ಅನುಸರಿಸಬಹುದಾದಂಥ ಮಾದರಿ ನಿಬಂಧನೆಗಳು ರಚಿತವಾದುವು. ಪರಿಮಿತ ಹೊಣೆಗಾರಿಕೆ ತತ್ತ್ವವನ್ನು (ಲಿಮಿಟೆಡ್ ಲೈಯಬಿಲಿಟಿ ಪ್ರಿನ್ಸಿಪಲ್) ಒಳಗೊಂಡ ಕಂಪನಿಗಳು ಅಧಿಕ ಸಂಖ್ಯೆಯಲ್ಲಿ ಜನ್ಮ ತಾಳಿದುವು. ಇಂದು ದೊಡ್ಡ ಉದ್ಯಮಗಳಲ್ಲಿ ನಿರತವಾದ ಸಂಸ್ಥೆಗಳೆಲ್ಲ ಸಾಮಾನ್ಯವಾಗಿ ಕಂಪನಿಗಳೇ ಆಗಿವೆ.

 ಭಾರತದಲ್ಲಿ 
ಬ್ರಿಟನಿನಿಂದ ಭಾರತಕ್ಕೆ ಬಂದ ಕಂಪನಿ ವ್ಯವಸ್ಥೆ ಕಳೆದ ಸು. ನೂರು ವರ್ಷಗಳಲ್ಲಿ ಈ ದೇಶದಲ್ಲೂ ತಕ್ಕ ಮಟ್ಟಿಗೆ ಬೆಳೆದಿದೆ. ಭಾರತದಲ್ಲಿ ಕಂಪನಿಗಳ ಕಾಯಿದೆ ಮೊಟ್ಟಮೊದಲು ಜಾರಿಗೆ ಬಂದದ್ದು ಪ್ರ.ಶ. 1850ರಲ್ಲಿ ಕಂಪನಿಗಳ ಪರಿಮಿತ ಹೊಣೆಗಾರಿಕೆಯ ತತ್ತ್ವ ಅನುಷ್ಠಾನಕ್ಕೆ ಬಂದದ್ದು 1857ರಲ್ಲಿ. ಈ ಕಾಯಿದೆಯಲ್ಲಿ ಕಂಡುಬಂದ ನ್ಯೂನತೆಗಳನ್ನು ನಿವಾರಿಸುವ ಸಲುವಾಗಿ ಇದಕ್ಕೆ ಆಗಿಂದಾಗ್ಗೆ ಅನೇಕ ತಿದ್ದುಪಡಿಗಳಾದುವು. ಇವನ್ನೆಲ್ಲ ಕ್ರೋಡೀಕರಿಸಿ. 1913ರಲ್ಲಿ ಒಂದು ಹೊಸ ಕಾಯಿದೆಯನ್ನು ಜಾರಿಗೆ ತರಲಾಯಿತು. ಹಳೆಯ ಕಾಯಿದೆಯನ್ನು ಸಂಪುರ್ಣವಾಗಿ ಬದಲಾಯಿಸಿ ಹೊಸದಾಗಿ ರೂಪಿಸಲಾದ ಕಾಯಿದೆ ಬಂದದ್ದು 1956ರಲ್ಲಿ. ಅನಂತರವೂ ಹಲವು ಸಾರಿ ಅಗತ್ಯ ಕಂಡಂತೆಲ್ಲ ಈ ಹೊಸ ಕಾಯಿದೆಗೂ ಸೂಕ್ತ ತಿದ್ದುಪಡಿಗಳಾಗಿವೆ.

 ಕಂಪನಿಯ ಲಕ್ಷಣಗಳು 
ಏಕವ್ಯಕ್ತಿ ಸಂಸ್ಥೆ (ನೋಡಿ-ಏಕವ್ಯಕ್ತಿ-ಸಂಸ್ಥೆ) ಮತ್ತು ಪಾಲುದಾರಿಕೆ ಸಂಸ್ಥೆಗಳಿಗೂ (ನೋಡಿ-ಪಾಲುದಾರಿಕೆ) ಕಂಪನಿಗೂ ಬಹಳ ವ್ಯತ್ಯಾಸಗಳುಂಟು. ಆ ಎರಡು ಸಂಸ್ಥೆಗಳ ಹಲವು ನ್ಯೂನತೆಗಳನ್ನು ಇದು ನಿವಾರಿಸುತ್ತದೆ. ಏಕವ್ಯಕ್ತಿ ಸಂಸ್ಥೆಯ ಗಾತ್ರವೂ ವ್ಯವಹಾರವೂ ಬಹಳ ಪರಿಮಿತ, ಒಬ್ಬ ವ್ಯಕ್ತಿ ತರಬಹುದಾದ ಬಂಡವಾಳ, ಬುದ್ಧಿಶಕ್ತಿ ಮತ್ತು ಅನುಭವಗಳ ಪ್ರಮಾಣವನ್ನು ಅದು ಅವಲಂಬಿಸಿರುತ್ತದೆ. ಆದರೆ ಆತನ ಹೊಣೆಯೋ, ಅಪರಿಮಿತ, ಸಂಸ್ಥೆಯ ಗಾತ್ರ ಅತಿಯಾಗಿ ಬೆಳೆದಾಗ ಅದನ್ನು ಅವನೊಬ್ಬನೇ ನಿರ್ವಹಿಸಲಾರ, ಸಹಾಯಕ್ಕಾಗಿ ಆತ ನೇಮಿಸಿಕೊಳ್ಳಬಹುದಾದ ಜನ ಅವನ ನೌಕರರೇ ಹೊರತು ಸಹಭಾಗಿಗಳಲ್ಲ. ಒಬ್ಬನಿಗಿಂತ ಹೆಚ್ಚು ಮಂದಿ ಕೂಡಿ ಸ್ಥಾಪಿಸುವ ಪಾಲುದಾರಿಕೆ ಸಂಸ್ಥೆಯ ಬಂಡವಾಳ ಏಕವ್ಯಕ್ತಿ ಸಂಸ್ಥೆಯದಕ್ಕಿಂತ ಹೆಚ್ಚಾಗಿರುವುದು ಸಾಧ್ಯ. ಹೆಚ್ಚು ಜನರ ಬುದ್ಧಿಶಕ್ತಿ, ಅನುಭವ ಒದಗುವುದೂ ಸಾಧ್ಯ. ಆದರೆ ಆಧುನಿಕ ಕೈಗಾರಿಕೆ ವ್ಯವಸ್ಥೆಯಲ್ಲಿ ಅನಿವಾರ್ಯವಾದ ಬೃಹತ್ ಸಂಸ್ಥೆಗಳ ಸ್ಥಾಪನೆ ನಿರ್ವಹಣೆಗಳು ಪಾಲುದಾರಿಕೆ ಸಂಸ್ಥೆಗಳಿಂದಲೂ ಸಾಧ್ಯವಾಗದೆ ಹೋಗಬಹುದು. ಕೇವಲ ಕೆಲವೇ ಮಂದಿಯ ಬಂಡವಾಳ, ಸಾಮಥರ್ಯ್‌ ಮತ್ತು ಅನುಭವಗಳ ಮಿತಿಯನ್ನೂ ಮೀರಿ ಸಂಸ್ಥೆ ಬೆಳೆದಾಗ ಈ ಗಾತ್ರಕ್ಕೆ ತಕ್ಕಂತೆ ಹೊಸ ಬಗೆಯ ಸಂಸ್ಥೆಯನ್ನೇ ಸ್ಥಾಪಿಸುವುದು ಅಗತ್ಯವಾಗುತ್ತದೆ. ಇಂಥ ಸಂಸ್ಥೆಯೇ ಕಂಪನಿ.
ಕಂಪನಿಯ ಲಕ್ಷಣಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು : ಅದು ಸ್ವಪ್ರೇರಣೆಯಿಂದ ಬಂದ, ಹಲವರು ಕಲೆತ ಸಂಸ್ಥೆ. ಈ ಸಂಸ್ಥೆಗೂ ಒಂದು ಹೆಸರು ಇರುತ್ತದೆ. ಇದಕ್ಕೆ ಒಂದು ಮುದ್ರೆಯೂ ಉಂಟು. ಲಾಭ ಗಳಿಸುವುದಕ್ಕಾಗಿ ಯಾವುದಾದರೊಂದು ವ್ಯಾಪಾರ ಮಾಡುವುದೇ ಸಾಮಾನ್ಯವಾಗಿ ಇದರ ಉದ್ದೇಶ. ಇದರ ಬಂಡವಾಳ ಹಲವು ಷೇರುಗಳಾಗಿ ವಿಭಾಗವಾಗಿರುತ್ತದೆ. ಷೇರುಗಳನ್ನು ಹೊಂದಿರುವವರೇ ಕಂಪನಿಯ ಸದಸ್ಯರು. ಅವರು ತಮ್ಮ ಷೇರುಗಳನ್ನು ಇತರರಿಗೆ ವರ್ಗಾಯಿಸಬಹುದು. ಇದರ ಸದಸ್ಯರ ಹೊಣೆಗಾರಿಕೆ ಸೀಮಿತವಾದದ್ದು; ಎಂದರೆ ಕಂಪನಿಯ ಸಾಲಿಗರರಿಗೆ ಸದಸ್ಯರು ವ್ಯೆಯಕ್ತಿಕವಾಗಿ ಬದ್ಧರಲ್ಲ. ಕಂಪನಿಯಲ್ಲಿ ಆ ಸದಸ್ಯರು ಎಷ್ಟು ಷೇರುಗಳನ್ನು ಹೊಂದಿರುತ್ತಾರೋ, ಆ ಷೇರುಗಳ ಸೂಚಿತ ಮೌಲ್ಯ ಅಥವಾ ಅಂಕಿತಮೌಲ್ಯಕ್ಕಿಂತ (ನಾಮಿನಲ್ ವ್ಯಾಲ್ಯೂ) ಹೆಚ್ಚು ನಷ್ಟಕ್ಕೆ ಬದ್ಧರಲ್ಲ, ಕಂಪನಿಯೆಂಬುದು ಒಂದು ವ್ಯಕ್ತಿಪ್ರಾಯವಾದ ಸಂಸ್ಥೆ. ಅದು ಕಾನೂನಿನ ಸೃಷ್ಟಿ. ಭೌತಿಕ ದೇಹ ಅದಕ್ಕಿಲ್ಲ. ಅದರ ಸದಸ್ಯರಿಂದ ಅದು ಸ್ಥಾಪಿಸಲ್ಪಟ್ಟದ್ದಾದರೂ ಆ ಸದಸ್ಯರಿಂದ ಭಿನ್ನವಾದ ಪ್ರತ್ಯೇಕವಾದ ವ್ಯಕ್ತಿತ್ತ್ವ ಅದಕ್ಕೆ ಉಂಟು. ಸದಸ್ಯರ ಸಾವು, ನಿರ್ಗಮನ, ಮನೋವೈಕಲ್ಯ, ದಿವಾಳಿತನ ಮುಂತಾದ ಘಟನೆಗಳಿಂದ ಸಂಸ್ಥೆಯ ಅಸ್ತಿತ್ವಕ್ಕೆ ಕುಂದು ಉಂಟಾಗುವುದಿಲ್ಲ. ಇಂಥ ಘಟನೆಗಳಿಂದ ಅಬಾಧಿತವಾಗಿ ಅದು ಮುಂದುವರಿಯಬಹುದಾದ ಸಂಸ್ಥೆ. ಕಂಪನಿಯ ಸದಸ್ಯರಿಗೂ ಕಂಪನಿಗೂ ವ್ಯತ್ಯಾಸ ಇರುವುದರಿಂದ ಅದರ ಸದಸ್ಯರು ಅದರ ಸಾಲಗಾರರೂ ಆಗಬಹುದು; ಅದರೊಂದಿಗೆ ವ್ಯವಹಾರ ನಡೆಸಬಹುದು. ಅವರು ಇತರರೊಂದಿಗೆ ಮಾಡುವ ವ್ಯವಹಾರದಿಂದ ಕಂಪನಿಗೆ ಯಾವ ಬಗೆಯ ಬಾಧ್ಯತೆಯೂ ಇರುವುದಿಲ್ಲ. ಏಕವ್ಯಕ್ತಿ ಸಂಸ್ಥೆ ಹಾಗೂ ಪಾಲುದಾರಿಕೆ ಸಂಸ್ಥೆಗಳಿಗೂ ಕಂಪನಿಗಳಿಗೂ ಇರುವ ಮುಖ್ಯ ವ್ಯತ್ಯಾಸಗಳಲ್ಲಿ ಇದೂ ಒಂದು. 
ಕಂಪನಿಗಳನ್ನು ಮೂರು ರೀತಿಯಾಗಿ ಸ್ಥಾಪಿಸಬಹುದು :

 ದೊರೆಯಿಂದ ಸನ್ನದು ಪಡೆದು ಸ್ಥಾಪಿಸಿದ ಸಂಸ್ಥೆ (ಉದಾಹರಣೆ: ಈಸ್ಟ್‌ ಇಂಡಿಯ ಕಂಪನಿ). ಸನ್ನದಿನಲ್ಲಿ ಸೂಚಿಸಿರುವ ನಿಬಂಧನೆಗಳಿಗೆ ಅನುಗುಣವಾಗಿ ಇದು ನಿರ್ವಹಿಸಲ್ಪಡುತ್ತದೆ. ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಮುಂಚೆ ಇಂಥ ಸಂಸ್ಥೆಗಳು ಸ್ಥಾಪಿತವಾಗುವ ಸಾಧ್ಯತೆಯಿತ್ತು.
 ಸರ್ಕಾರದ ವಿಶೇಷ ಕಾಯಿದೆಯ ಮೂಲಕ ಸ್ಥಾಪಿತವಾದ ಸಂಸ್ಥೆ (ಉದಾಹರಣೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯ). ಈ ಸಂಸ್ಥೆಯ ನಿರ್ವಹಣೆಗೆ ಇದಕ್ಕೆ ಸಂಬಂಧಿಸಿದ ಕಾಯಿದೆಯಲ್ಲಿರುವ ವಿಧಿಗಳೇ ಆಧಾರ.
 ಭಾರತದ ಕಂಪನಿಗಳ ಶಾಸನದ ಪ್ರಕಾರವಾಗಿ ಕೂಡುಬಂಡವಾಳ ಕಂಪನಿಗಳ ರಿಜಿಸ್ಟ್ರಾರರಿಂದ (ವಿಲೇಖನಾಧಿಕಾರಿ ಅಥವಾ ನೋಂದಣಿ ಅಧಿಕಾರಿ) ಸಮ್ಮತಿ ಪಡೆದು ಸ್ಥಾಪಿತವಾದ ಕಂಪನಿಯೇ ರಿಜಿಸ್ಟರ್ಡ್ ಕಂಪನಿ ಅಥವಾ ನಿಬದ್ಧ ಸಂಸ್ಥೆ ಅಥವಾ ನೋಂದಣಿಯಾದ ಸಂಸ್ಥೆ. ಇಪ್ಪತ್ತಕ್ಕಿಂತ ಹೆಚ್ಚು ಸದಸ್ಯರಿರುವ ಎಲ್ಲ ಸಂಸ್ಥೆಗಳೂ ಕಂಪನಿಗಳ ಶಾಸನದ ಪ್ರಕಾರವೋ ಇನ್ನಾವುದಾದರೂ ತತ್ಸಮವಾದ ಶಾಸನದ ಪ್ರಕಾರವೋ ನಿಬದ್ಧವಾಗತಕ್ಕದ್ದೆಂಬುದು ಭಾರತ ಕಂಪನಿಗಳ ಕಾಯಿದೆಯ ಹನ್ನೊಂದನೆಯ ಕಲಮಿನ ವಿಧಿ (ಬ್ಯಾಂಕು ವ್ಯವಹಾರ ಮಾಡುವ ಸಂಸ್ಥೆಯಾಗಿದ್ದರೆ ಅದರಲ್ಲಿ ಹತ್ತಕ್ಕಿಂತ ಹೆಚ್ಚು ಸದಸ್ಯರು ಇದ್ದರೂ ಅದು ನೋಂದಣಿ ಮಾಡಿಸಿಕೊಳ್ಳಬೇಕು).

ನಿಬದ್ಧ ಅಥವಾ ನೋಂದಣಿಯಾದ ಕಂಪನಿಗಳಲ್ಲಿ ಎರಡು ವಿಧ: 1 ಪರಿಮಿತ ಹೊಣೆಗಾರಿಕೆಯುಳ್ಳವು; 2 ಅಪರಿಮಿತ ಹೊಣೆಗಾರಿಕೆಯುಳ್ಳವ. ಅಪರಿಮಿತ ಹೊಣೆಗಾರಿಕೆಯುಳ್ಳ ಕಂಪನಿಗಳ ಸದಸ್ಯರು ಕಂಪನಿಯ ಸಾಲಕ್ಕೆ ವೈಯುಕ್ತಿಕವಾಗಿ ಹೊಣೆಯಾಗಿರುತ್ತಾರೆ. ಇಂಥ ಕಂಪನಿಗಳು ಬಲು ವಿರಳ.

ಪರಿಮಿತ ಹೊಣೆಗಾರಿಕೆ ಕಂಪನಿಗಳಲ್ಲಿ ಎರಡು ವಿಧ. ಒಂದನೆಯದು ಖಾತರಿಯ ಪರಿಮಿತಿಯ ಕಂಪನಿ. ಸಂಸ್ಥೆಯ ಸದಸ್ಯರಲ್ಲಿ ಒಬ್ಬೊಬ್ಬರೂ ಅವರವರು ಒಪ್ಪಿದ ಒಂದು ಪರಮಾವಧಿ ಮೊತ್ತದವರೆಗೆ ಕಂಪನಿಯ ಋಣದ ಹೊಣೆ ಹೊರುವುದಾಗಿ ಖಾತರಿ ಕೊಡುತ್ತಾರೆ. ಇಂಥ ಸಂಸ್ಥೆ ಸಾಮಾನ್ಯವಾಗಿ ವ್ಯಾಪಾರದ ಉದ್ದೇಶದಿಂದ ಸ್ಥಾಪಿತವಾಗಿರುವುದಿಲ್ಲ. ಯಾವುದಾದರೊಂದು ವಿಶಿಷ್ಟ ಹಿತದ ರಕ್ಷಣೆಯೋ ಸಮಾಜ ಸೇವೆಯೋ ಲಾಭವೇ ಉದ್ದೇಶವಲ್ಲದ ಬೇರೆ ಯಾವುದಾದರೂ ಉದ್ಯಮವೋ ಇದರ ಗುರಿ. ಈ ಸಂಸ್ಥೆಗಳು ತಮ್ಮ ಹೆಸರಿನ ಕೊನೆಯಲ್ಲಿ ಕಂಪನಿ ಎಂಬ ಪದವನ್ನಾಗಲಿ, ಲಿಮಿಟೆಡ್ (ಪರಿಮಿತ) ಎಂಬ ಪದವನ್ನಾಗಲಿ ಹೊಂದಿರುವುದಿಲ್ಲ. ಇಂಥ ಕಂಪನಿಗಳು ಈಚೆಗೆ ವಿರಳವಾಗಿ ಸ್ಥಾಪಿತವಾಗುತ್ತಿವೆ.
ಪರಿಮಿತ ಹೊಣೆಗಾರಿಕೆಯ (ಲಿಮಿಟೆಡ್) ಸಂಸ್ಥೆ ಇನ್ನೊಂದು ವಿಧ. ಇದು ಸಾಮಾನ್ಯವಾಗಿ ವ್ಯಾಪಾರದ ಉದ್ದೇಶದಿಂದ ಸ್ಥಾಪಿತವಾಗುತ್ತದೆ. ಇದರ ಸದಸ್ಯರು ಇದರಲ್ಲಿ ಷೇರುಗಳನ್ನು ಹೊಂದಿರುತ್ತಾರೆ. ಈ ಷೇರುಗಳ ಅಂಕಿತಮೌಲ್ಯದ (ನಾಮಿನಲ್ ವ್ಯಾಲ್ಯು) ಅಥವಾ ಸೂಚಿತಮೌಲ್ಯದ ಹಣದವರೆಗೆ ಮಾತ್ರ ಸದಸ್ಯರು ಹೊಣೆ ಹೊರಬೇಕಾಗತಕ್ಕದ್ದು ಈ ಸಂಸ್ಥೆಯ ಮುಖ್ಯ ಲಕ್ಷಣ. ವ್ಯವಹಾರ ಪ್ರಪಂಚದಲ್ಲಿ ಇಂಥ ಸಂಸ್ಥೆಗಳೇ ಅಧಿಕ ಸಂಖ್ಯೆಯಲ್ಲಿವೆ.

ಪರಿಮಿತ ಹೊಣೆಗಾರಿಕೆಯ ಕಂಪನಿಗಳನ್ನು ಮತ್ತೆ ಎರಡು ರೀತಿಯಾಗಿ ವಿಂಗಡಿಸಬಹುದು: 1 ಸಾರ್ವಜನಿಕ (ಪಬ್ಲಿಕ್) ಕಂಪನಿ ಮತ್ತು 2 ಖಾಸಗಿ (ಪ್ರೈವೇಟ್) ಕಂಪನಿ. ಸಾರ್ವಜನಿಕ ಕಂಪನಿಯ ಲಕ್ಷಣಗಳು ಇವು: 1 ಕಂಪನಿಯ ವಿಧಿಗಳಿಗೆ ಅನುಸಾರವಾಗಿ ಸಾರ್ವಜನಿಕರು ಅದರ ಸದಸ್ಯರಾಗಿರಬಹುದು. 2 ಅದರಲ್ಲಿ ಕನಿಷ್ಠ ಪಕ್ಷ ಏಳು ಮಂದಿ ಸದಸ್ಯರಿರಬೇಕು; ಏಳಕ್ಕಿಂತ ಹೆಚ್ಚಾಗಿ ಎಷ್ಟು ಮಂದಿ ಸದಸ್ಯರು ಬೇಕಾದರೂ ಇರಬಹುದು. 3 ಸಾರ್ವಜನಿಕರು ಅದರ ಷೇರುಗಳನ್ನು ಪಡೆಯಬಹುದೆಂದು ವಿವರಣಪತ್ರದ (ಪ್ರಾಸ್ಪೆಕ್ಟಸ್) ಮೂಲಕ ಅದು ಆಹ್ವಾನಿಸುತ್ತದೆ. 4 ಅದಕ್ಕೆ ಕನಿಷ್ಠಪಕ್ಷ ಮೂವರಾದರೂ ನಿರ್ವಾಹಕರು (ಡೈರೆಕ್ಟರುಗಳು) ಇರತಕ್ಕದ್ದು. 5 ಅದರ ಷೇರುಗಳನ್ನು ಸದಸ್ಯರು ಇತರರಿಗೆ ವರ್ಗಾಯಿಸಬಹುದು.

ಖಾಸಗಿ ಕಂಪನಿಯ ಲಕ್ಷಣಗಳು ಈ ರೀತಿ ಇವೆ: 1 ಇದರ ಸದಸ್ಯರ ಸಂಖ್ಯೆ ಎರಡಕ್ಕಿಂತ ಕಡಿಮೆಯಾಗಿಯೂ ಐವತ್ತಕ್ಕಿಂತ ಹೆಚ್ಚಾಗಿಯೂ (ಈ ಸಂಖ್ಯೆಯಲ್ಲಿ ಆ ಕಂಪನಿಯ ನೌಕರರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾದುದಿಲ್ಲ) ಇರಬಾರದು. 2 ಇದರ ಷೇರುಗಳನ್ನು ವರ್ಗಾಯಿಸಲು ನಿರ್ಬಂಧಗಳಿರುತ್ತವೆ. 3 ಈ ಕಂಪನಿಯ ಷೇರು ಹಾಗೂ ಸಾಲಪತ್ರಕ್ಕೆ ಚಂದಾ ನೀಡಬೇಕೆಂದು ಸಾರ್ವಜನಿಕರನ್ನು ವಿವರಣ ಪತ್ರದ ಮೂಲಕ ಆಹ್ವಾನಿಸುವಂತಿಲ್ಲ. 4 ಇದು ಒಂದು ದೃಷ್ಟಿಯಲ್ಲಿ ಪಾಲುದಾರಿಕೆ ಸಂಸ್ಥೆಯಂತೆಯೇ ಇರುತ್ತದೆ. ಕ್ಲುಪ್ತವಾದ ಸಂಖ್ಯೆಯನ್ನೊಳಗೊಂಡು, ಸಾಮಾನ್ಯವಾಗಿ ಪರಸ್ಪರ ಪರಿಚಿತರೂ ಸಂಬಂಧಿಗಳೂ ಕೂಡಿ ಸ್ಥಾಪಿಸಿದ ಸಂಸ್ಥೆಯೇ ಖಾಸಗಿ ಕಂಪನಿ.
ಕಂಪನಿಯ ಪ್ರವರ್ತನೆ (ಕಂಪನಿ ಪ್ರೊಮೋಷನ್) ಮತ್ತು ಪ್ರವರ್ತಕ (ಪ್ರೊಮೋಟರ್): ಒಂದು ಕಂಪನಿಯನ್ನು ಸ್ಥಾಪಿಸುವುದು ಕಷ್ಟಸಾಧ್ಯವಾದ ಕೆಲಸ. ಆರಂಭಿಸಲಿರುವ ಉದ್ಯಮದ ಯಶಸ್ಸಿನಲ್ಲಿ ನಂಬಿಕೆಯಿಟ್ಟು ಆ ಕಂಪನಿಯ ಬಂಡವಾಳಕ್ಕೆ ಹಣ ಕೊಡಲು ಮುಂದೆಬರುವಂತೆ ಜನರನ್ನು ಆಕರ್ಷಿಸಬೇಕಾಗುತ್ತದೆ. ಲಾಭದಾಯಕವಾಗಬಹುದಾದಂಥ ಉದ್ಯಮವೊಂದನ್ನು ಕಂಡುಹಿಡಿದು ಅದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ, ಆ ಉದ್ಯಮಕ್ಕೆ ಅಗತ್ಯವಾದ ನಾನಾ ಅಂಶಗಳನ್ನು ಸಂಘಟಿಸಿ ವಿವರಗಳನ್ನಿತ್ತು, ಕಂಪನಿಯನ್ನು ಸ್ಥಾಪಿಸುವ ಕಾರ್ಯಕ್ಕೆ ಕಂಪನಿಯ ಪ್ರವರ್ತನೆ ಎಂದು ಹೆಸರು, ಈ ಕಾರ್ಯನಿರ್ವಹಣೆ ಮಾಡುವವನೇ ಕಂಪನಿಯ ಪ್ರವರ್ತಕ.

ಹೊಸ ಹೊಸ ಕಂಪನಿಗಳನ್ನು ಸ್ಥಾಪಿಸುವುದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿರುವವರು ಅನೇಕರುಂಟು. ಕಂಪನಿಯ ಪ್ರವರ್ತನೆಯೇ ತಮ್ಮ ವೃತ್ತಿಯಾಗಿರದಿದ್ದರೂ ತಮ್ಮ ವ್ಯವಹಾರದ ಅಂಗವಾಗಿ ಆಗೊಮ್ಮೆ ಈಗೊಮ್ಮೆ ಕಂಪನಿಗಳನ್ನು ಸ್ಥಾಪಿಸಿ ಅದರಲ್ಲೇ ಆಸಕ್ತಿವಹಿಸಿ ಅದರ ಆಡಳಿತವನ್ನು ಮುಂದುವರಿಸಿಕೊಂಡು ಹೋಗುವವರೂ ಉಂಟು. ಒಂದು ಹೊಸ ಉತ್ಪಾದನೆಯ ವಿಧಾನವನ್ನು ಕಂಡುಹಿಡಿದವನು ಆ ವಿಧಾನವನ್ನು ಅಳವಡಿಸಿ ಉದ್ಯಮವೊಂದನ್ನು ಪ್ರಾರಂಭಿಸುವ ಸಲುವಾಗಿ ಒಂದು ಕಂಪನಿಯನ್ನು ಪ್ರವರ್ತಿಸಬಹುದು.
ಕಂಪನಿಯ ಪ್ರವರ್ತಕರು ಬಿಡಿ ವ್ಯಕ್ತಿಗಳೇ ಆಗಿರಬೇಕೆಂಬ ನಿಯಮವೇನೂ ಇಲ್ಲ. ಒಬ್ಬರಿಗಿಂತ ಹೆಚ್ಚು ಜನ ಸೇರಿ ಇದಕ್ಕಾಗಿಯೇ ಒಂದು ಮಂಡಳಿಯನ್ನೋ ಪಾಲುದಾರಿಕೆ ಸಂಸ್ಥೆಯನ್ನೋ ಕಂಪನಿಯನ್ನೋ ಸ್ಥಾಪಿಸಿಕೊಳ್ಳಬಹುದು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಂಪನಿಯ ಪ್ರವರ್ತನೆಯೇ ಉದ್ಯೋಗವಾಗಿ ಉಳ್ಳವರು ಅನೇಕರಿದ್ದಾರೆ. ಕಂಪನಿಗಳನ್ನು ಪ್ರಾರಂಭಿಸುವುದಷ್ಟೇ ಅವರ ಕೆಲಸ. ಮುಂದೆ ಅದನ್ನು ನಡೆಸುವುದು ಅವರ ಹೊಣೆಯಲ್ಲ. ಅದನ್ನು ಬೇರೆಯವರು ನಿರ್ವಹಿಸುತ್ತಾರೆ. ಆದರೆ ಭಾರತದಲ್ಲಿ ಈ ಬಗೆಯ ಪ್ರತ್ಯೇಕ ವರ್ಗವಿಲ್ಲ. ಕಂಪನಿಯನ್ನು ಪ್ರಾರಂಭಿಸಿದವರೇ ಸಾಮಾನ್ಯವಾಗಿ ಅದನ್ನು ನಡೆಸುವ ಕರ್ತವ್ಯ ನಿರ್ವಹಿಸುತ್ತಾರೆ.

ಪ್ರವರ್ತಕರ ಜವಾಬ್ದಾರಿ ಗುರುತರವಾದದ್ದು, ಜನ್ಮ ತಾಳಲಿರುವ ಕಂಪನಿಗೆ ಸರಿಯಾದ ರೂಪು ನೀಡುವವರು ಅವರು. ಅದು ಸರಿಯಾದವರ ಉಸ್ತುವಾರಿಯಲ್ಲಿ ಸಮರ್ಪಕವಾಗಿ ನಡೆಯುವಂತೆ ಮಾಡುವ ಭಾರ ಅವರದು. ಅವರು ಜನಿಸಲಿರುವ ಕಂಪನಿಗೆ ದ್ರೋಹ ಬಗೆಯದೆ ಅದರ ಆರ್ಥಿಕ ಹಿತರಕ್ಷಣೆ ಮಾಡುವ ನಂಬಿಕೆಗೆ ಅರ್ಹರಾದವರಾಗಿರಬೇಕು. ಭಾವಿ ಕಂಪನಿಯ ಪ್ರತಿನಿಧಿಗಳೂ ಅವರೇ. ಕಂಪನಿಯ ಪ್ರವರ್ತನೆಯ ಸಂದರ್ಭದಲ್ಲಿ ಅವರು ರಹಸ್ಯವಾಗಿ ಯಾವ ಲಾಭ ಗಳಿಸುವುದಕ್ಕೂ ಯತ್ನಿಸಬಾರದು. ಕಂಪನಿಯ ಭವಿಷ್ಯವೇ ಪ್ರವರ್ತಕರ ಕೈಯ್ಯಲ್ಲಿದೆಯೆಂದರೆ ಉತ್ಪ್ರೇಕ್ಷೆಯಲ್ಲ.		

ಕಂಪನಿಯ ಪ್ರವರ್ತನೆಯ ಕಾರ್ಯದಲ್ಲಿ ಸಾಮಾನ್ಯವಾಗಿ ನಾಲ್ಕು ಘಟ್ಟಗಳಿರುತ್ತವೆ. ಮೊದಲನೆಯದಾಗಿ ಸ್ಥಾಪಿಸಬಹುದಾದ ಉದ್ಯಮದ ಕಲ್ಪನೆ. ಎರಡನೆಯದು ಅದರ ದೀರ್ಘ ಪರಿಶೀಲನೆ. ಮೂರನೆಯದು ಸಂಘಟನೆ ಅಥವಾ ಜೋಡಣೆ, ನಾಲ್ಕನೆಯದು ಹಣಶೇಖರಣೆ. ಯಾವುದಾದರೂ ಒಂದು ಉದ್ಯಮದಿಂದ ಲಾಭ ಗಳಿಸಬಹುದೆಂಬ ಭಾವನೆ ಯಾರಿಗಾದರೂ ಹೊಳೆಯಬಹುದು, ಆದರೆ ಈ ಕಲ್ಪನೆಯ ಕೂಸಿಗೆ ವಾಸ್ತವಿಕತೆಯ ರಕ್ತಮಾಂಸ ತುಂಬುವುದು ಬಹಳ ಅಗತ್ಯ. ಉದಾಹರಣೆಗೆ, ಒಂದು ಪದಾರ್ಥವನ್ನು ತಯಾರಿಸುವ ಹೊಸ ವಿಧಾನವೊಂದನ್ನು ಯಾರಾದರೂ ಕಂಡುಹಿಡಿಯಬಹುದು. ಆ ವಿಧಾನವನ್ನು ಕಂಡುಹಿಡಿದವನಿಗೆ ಅದರ ವಿಚಾರದಲ್ಲಿ ಬಹಳ ಮಮತೆಯೂ ಉತ್ಸಾಹವೂ ಇರುವುದು ಸಹಜ. ಆದರೆ ಅದು ಎಷ್ಟರಮಟ್ಟಿಗೆ ಲಾಭಪ್ರದವಾಗಿ ಅನುಷ್ಠಾನಯೋಗ್ಯವೆಂಬುದನ್ನು ಪರಿಶೀಲಿಸುವುದು ಅತ್ಯಾವಶ್ಯಕ. ಹೊಸ ವಿಧಾನದ ರಚನಕಾರನಿಗೆ ಈ ದೃಷ್ಟಿಯಲ್ಲಿ ಸಾಕಷ್ಟು ಅನುಭವ ಇರುವುದು ಬಹಳ ಅಪರೂಪ. ವ್ಯವಹಾರಚಾತುರ್ಯವೂ ಅವನಿಗೆ ಇಲ್ಲದೆ ಇರಬಹುದು. ಆದ್ದರಿಂದ ಆತ ಈ ವಿಚಾರದಲ್ಲಿ ನಿಪುಣನಾದ ಪ್ರವರ್ತಕನಿಗೆ ತನ್ನ ಅಭಿಪ್ರಾಯವನ್ನು ವಿವರಿಸಬೇಕಾಗುತ್ತದೆ. ಪ್ರವರ್ತಕ ಅದನ್ನು ಸ್ಥೂಲವಾಗಿ ಪರಿಶೀಲಿಸುತ್ತಾನೆ. ಅದನ್ನು ಕಾರ್ಯಗತಗೊಳಿಸಿದರೆ ಅದು ಲಾಭದಾಯಕವಾದೀತೆಂದು ಕಂಡುಬಂದರೆ ಆಗ ಅವನು ಅದನ್ನು ದೀರ್ಘವಾದ ಪರಿಶೀಲನೆಗೆ ಒಳಪಡಿಸುತ್ತಾನೆ. ಇದಕ್ಕೆ ಅಗತ್ಯವಾದ ಬಂಡವಾಳವೆಷ್ಟು, ಇದರಿಂದ ಬರಬಹುದಾದ ಲಾಭವೆಷ್ಟು ಎಂಬ ವಿಚಾರವಾಗಿ ಪರಿಣತರಿಂದ ದೀರ್ಘವರದಿಯನ್ನು ಪಡೆಯುತ್ತಾನೆ. ಉತ್ಪಾದನೆಗೆ ಸಂಬಂಧಿಸಿದ ಸಮಸ್ಯೆಗಳು ಯಾವುವು, ಮಾರಾಟದ ಸಾಧ್ಯಾಸಾಧ್ಯತೆಗಳೆಷ್ಟು, ಕಾರ್ಖಾನೆಯನ್ನು ಯಾವ ಸ್ಥಳದಲ್ಲಿ ಸ್ಥಾಪಿಸಿದರೆ ಅದರಿಂದ ಪರಮಾವಧಿಯ ಪ್ರಯೋಜನ ಪಡೆಯಬಹುದು, ಉತ್ಪಾದನೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ, ಕಾರ್ಮಿಕರ ಪಡೆ, ವಾತಾವರಣ ಮುಂತಾದ ಸೌಕರ್ಯಗಳು ಎಷ್ಟರಮಟ್ಟಿಗೆ ಉಂಟು-ಎಂಬುದನ್ನೆಲ್ಲ ಆಯಾ ವಿಚಾರಗಳಿಗೆ ಸಂಬಂಧಪಟ್ಟ ತಜ್ಞರೊಂದಿಗೆ ಸಮಾಲೋಚಿಸಿ ಅವರ ಸಲಹೆ ಪಡೆಯುತ್ತಾನೆ.

ಈ ದೀರ್ಘ ಪರಿಶೀಲನೆಯ ಅನಂತರ ಮೂರನೆಯ ಘಟ್ಟ ಪ್ರಾರಂಭವಾಗುತ್ತದೆ. ಕಂಪನಿಯನ್ನು ಸ್ಥಾಪಿಸಬಹುದೆಂದು ಅವನಿಗೆ ಮನವರಿಕೆಯಾದ ಮೇಲೆ ಆತ ಅದಕ್ಕೆ ಬೇಕಾದ ಬಂಡವಾಳ ಸಂಗ್ರಹಣೆಯ ಯತ್ನದಲ್ಲಿ ತೊಡಗುತ್ತಾನೆ. ಕಂಪನಿಯಲ್ಲಿ ಅನುಸರಿಸಲಿರುವ ಹೊಸ ಉತ್ಪಾದನೆಯ ವಿಧಾನವನ್ನು ಇತರರು ಯಾರೂ ಅನುಕರಿಸದಂತೆ ಅದಕ್ಕೆ ಕಾನೂನಿನ ರಕ್ಷಣೆ ದೊರಕಿಸಿಕೊಳ್ಳುತ್ತಾನೆ. ಆ ಉದ್ಯಮಕ್ಕೆ ಬೇಕಾದ ನಿವೇಶನವೇ ಮುಂತಾದ ಆಸ್ತಿಗಳನ್ನು ಪಡೆಯಲು ಕ್ರಮಕೈಗೊಳ್ಳಬೇಕಾಗುತ್ತದೆ. ಕಂಪನಿಯ ಮುಖ್ಯ ನಿರ್ವಾಹಕರ ಹುದ್ದೆಗಳಿಗೆ ಯಾರನ್ನು ನೇಮಕ ಮಾಡಿಕೊಳ್ಳಬೇಕೆಂಬ ವಿಚಾರವಾಗಿ ತೀರ್ಮಾನ ಮಾಡುವುದು ಆವಶ್ಯ.

ಹೀಗೆ ಕಂಪನಿಯ ಸ್ಥಾಪನೆಗೆ ಅಗತ್ಯವಾದ ಅಂಶಗಳನ್ನೆಲ್ಲ ಜೋಡಿಸಿಕೊಂಡ ಮೇಲೆ ಪ್ರವರ್ತನೆಯ ಮುಂದಿನ ಘಟ್ಟದಲ್ಲಿ ತೊಡಗಬೇಕಾಗುತ್ತದೆ. ಸ್ಥಾಪಿಸಲಿರುವ ಕಂಪನಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನೊಳಗೊಂಡ ಒಂದು ವರದಿಯನ್ನು ಸಿದ್ಧಪಡಿಸಬೇಕು. ಸಾರ್ವಜನಿಕರಿಗೂ ಕಂಪನಿಯ ಷೇರುಗಳನ್ನು ಸಾರ್ವಜನಿಕರಿಗೆ ಮಾರುವ ಹೊಣೆ ಹೊರುವವರಿಗೂ ಇದನ್ನು ನೀಡಲಾಗುತ್ತದೆ.

ಕಂಪನಿಯನ್ನು ಸ್ಥಾಪಿಸುವ ಕಾರ್ಯದಲ್ಲಿ ಆತ ಇನ್ನೂ ಕೆಲವರೊಂದಿಗೆ ಸೇರಬೇಕಾಗುತ್ತದೆ. ಇವರೆಲ್ಲರೂ ಪ್ರವರ್ತಕರೇ, ಇವರೆಲ್ಲ ಸೇರಿ ತಮ್ಮ ರಾಜ್ಯದಲ್ಲಿರುವ ಕೂಡುಬಂಡವಾಳ ಕಂಪನಿಗಳ ರಿಜಿಸ್ಟ್ರಾರರಿಗೆ ಅರ್ಜಿ ಹಾಕಿಕೊಳ್ಳಬೇಕು. ಇವರು ತಮ್ಮ ಕಂಪನಿಯ ಸ್ವರೂಪ ಹಾಗೂ ಆಡಳಿತಗಳನ್ನು ವಿವರಿಸಿರುವ ಎರಡು ದಸ್ತಾವೇಜುಗಳನ್ನು ತಯಾರಿಸಿ ರಿಜಿಸ್ಟ್ರಾರರಿಗೆ ಸಲ್ಲಿಸಬೇಕಾಗುತ್ತದೆ. ಸಂಘದ ಷರತ್ತುಗಳ ಲಿಖಿತ (ಮೆಮೊರಾಂಡಂ ಆಫ್ ಅಸೋಸಿಯೇಷನ್) ಎಂಬುದು ಮೊದಲನೆಯದು. ಸಂಘದ ವಿಧಿಗಳು (ಆರ್ಟಿಕಲ್ಸ್‌ ಆಫ್ ಅಸೋಸಿಯೇಷನ್) ಎರಡನೆಯದು.

ಸಂಘದ ಷರತ್ತುಗಳ ಲಿಖಿತ : ಇದು ಬಹಳ ಮುಖ್ಯವಾದ ದಸ್ತಾವೇಜು, ಇದೇ ಕಂಪನಿಯ ಪ್ರಣಾಳಿಕೆ, ಕಂಪನಿಯ ಸ್ಥಾಪನೆಗೆ ಮುಖ್ಯವಾದ ಅಂಶಗಳನ್ನೆಲ್ಲ ಇದು ಒಳಗೊಂಡಿರುತ್ತದೆ. ಕಂಪನಿಯ ಹೆಸರು, ಅದರ ಅಧಿಕೃತ ಕಚೇರಿ ಇರುವ ರಾಜ್ಯದ ಹೆಸರು, ಅದರ ಉದ್ದೇಶ-ಇವನ್ನು ಮುಖ್ಯವಾಗಿ ಇಲ್ಲಿ ನಮೂದಿಸಬೇಕಾಗುತ್ತದೆ.

ಕಂಪನಿಗೆ ಯಾವ ಹೆಸರನ್ನು ಬೇಕಾದರೂ ಇಡಬಹುದು. ಆದರೆ ಆಗಲೇ ಇರತಕ್ಕ ಯಾವ ಕಂಪನಿಯ ಹೆಸರನ್ನೂ ಮತ್ತೆ ಇಡಲಾಗದು. ಅದನ್ನು ಹೋಲುವಂಥ ಹೆಸರನ್ನಿಡಲು ಅವಕಾಶವಿಲ್ಲ. ಹೆಸರಿನ ಕೊನೆಯಲ್ಲಿ ಲಿಮಿಟೆಡ್ ಎಂಬ ಪದ ಇರತಕ್ಕದ್ದು. ಅದು ಖಾಸಗಿ ಕಂಪನಿಯಾದ ಪಕ್ಷದಲ್ಲಿ ಪ್ರೈವೇಟ್ ಲಿಮಿಟೆಡ್ ಎಂಬುದಾಗಿ ಸೇರಿಸತಕ್ಕದ್ದು. 

ಕಂಪನಿಯ ಉದ್ದೇಶ ಬಹಳ ಮುಖ್ಯ. ಅದರ ಅಧಿಕಾರವ್ಯಾಪ್ತಿಗೆ ಉದ್ದೇಶವೇ ಆಧಾರ, ಇದನ್ನು ವಿವರಿಸುವಾಗ ಬಹಳ ಎಚ್ಚರಿಕೆ ಇರಬೇಕು. ಕಂಪನಿಯ ಉದ್ದೇಶ ಸ್ಪಷ್ಟವಾಗಿರಬೇಕು; ಖಚಿತವಾಗಿರಬೇಕು. ಮುಂದೆ ಕಂಪನಿಯ ಮೂಲಭೂತವಾದ ಚಟುವಟಿಕೆಗಳು ಬೆಳೆಯಲು ಸಾಕಷ್ಟು ಅವಕಾಶವಿರುವಂತೆ ಅದರ ಉದ್ದೇಶಗಳ ವಿವರಣೆ ಇರಬೇಕು. ಆದರೆ ಅದು ತೀರ ವ್ಯಾಪಕವಾಗಬಾರದು.
ಷೇರುದಾರರು ಷೇರುಗಳ ಮೇಲೆ ಇನ್ನೂ ಕೊಟ್ಟಿಲ್ಲದ ಹಣವಷ್ಟಕ್ಕೆ ಅವರ ಹೊಣೆಗಾರಿಕೆ ಸೀಮಿತವಾಗಿದೆಯೆಂಬ ಹೇಳಿಕೆಯನ್ನು ಸಂಘದ ಷರತ್ತುಗಳಲ್ಲಿ ಸೇರಿಸಬೇಕು.

ಇದರ ಇನ್ನೊಂದು ಮುಖ್ಯ ವಿಭಾಗವೆಂದರೆ ಬಂಡವಾಳವನ್ನು ಕುರಿತ ವಿಚಾರದ್ದು, ಕಂಪನಿ ಪಡೆಯಬಂiÀÄಸುವ ಅಧಿಕೃತಬಂಡವಾಳದ ಮೊಬಲಗನ್ನೂ ಷೇರುಗಳಾಗಿ ಅದರ ವಿಂಗಡಣೆಯನ್ನೂ ಅದರಲ್ಲಿ ಸೂಚಿಸಬೇಕು.

ಸಂಘದ ಷರತ್ತುಗಳ ಲಿಖಿತದಲ್ಲಿ ಕಂಪನಿಯ ಪ್ರವರ್ತಕರ ಹೆಸರುಗಳೂ ಅವರ ವಿಳಾಸಗಳೂ ಅವರು ಕಂಪನಿಯಿಂದ ಪಡೆಯುವ ಷೇರುಗಳ ಸಂಖ್ಯೆಗಳೂ ಅವರ ಸಹಿಗಳೂ ಇರಬೇಕು. ಇವರೇ ಕಂಪನಿಯ ಪ್ರಥಮ ನಿರ್ವಾಹಕರಾಗುತ್ತಾರೆ.

 ಸಂಘದ ವಿಧಿಗಳು 
ಕಂಪನಿಯ ಆಂತರಿಕ ರಚನೆಯ ಸ್ವರೂಪವೂ ಕಂಪನಿಯ ನಿರ್ವಹಣೆಯಲ್ಲಿ ಅನುಸರಿಸಬೇಕಾದ ನಿಬಂಧನೆಗಳೂ ಇಲ್ಲಿ ಉಲ್ಲೇಖಿತವಾಗಿರುತ್ತವೆ. ಕಂಪನಿಯ ನಿರ್ವಾಹಕರ ಅಧಿಕಾರ, ಕಂಪನಿಯ ಸಭೆಗಳನ್ನು ನಡೆಸುವ ವಿಧಾನ, ಮತನೀಡಿಕೆ, ಸಭೆಯನ್ನು ನಡೆಸಲು ಹಾಜರಿರಬೇಕಾದ ಸದಸ್ಯರ ಕನಿಷ್ಠಸಂಖ್ಯೆ, ಷೇರುಗಳ ವರ್ಗಾವಣೆ ಹಾಗೂ ರದ್ದುಮಾಡುವ ವಿಧಾನಗಳು, ಕಂಪನಿಯ ಲೆಕ್ಕ ಇಡುವ ರೀತಿ-ಮುಂತಾದವುಗಳಿಗೆ ಸಂಬಂಧಿಸಿದ ನಿಬಂಧನೆಗಳು ಇಲ್ಲಿರುತ್ತವೆ.

ಸಂಘದ ವಿಧಿಗಳನ್ನು ಪ್ರತ್ಯೇಕವಾಗಿ ತಯಾರಿಸದೆ ಇದ್ದರೆ ಭಾರತೀಯ ಕಂಪನಿಗಳ ಶಾಸನದ ಎ ತಃಖ್ತೆಯಲ್ಲಿರುವ (ಟೇಬಲ್ ಎ) ಮಾದರಿ ವಿಧಿಗಳನ್ನೇ ಅನುಸರಿಸಬಹುದು.

ಸಂಘದ ಷರತ್ತುಗಳನ್ನೂ ವಿಧಿಗಳನ್ನೂ ಅಚ್ಚು ಮಾಡಿಸಬೇಕು. ಇವುಗಳಲ್ಲಿ ಸೂಚಿತವಾಗಿರುವ ನಿಯಮಗಳಿಗೆ ಕಂಪನಿ ಬದ್ಧವಾಗಿರುತ್ತದೆ; ಸದಸ್ಯರೂ ಬದ್ಧರಾಗಿರುತ್ತಾರೆ. ಇವು ಸಾರ್ವಜನಿಕ ದಾಖಲೆಗಳು. ಕಂಪನಿಯೊಂದಿಗೆ ವ್ಯವಹಾರ ಮಾಡಬಂiÀÄಸುವ ಯಾರಾದರೂ ಇವನ್ನು ಪರಿಶೀಲಿಸಬಹುದು.

ಪ್ರವರ್ತಕರು ಇವುಗಳ ಜೊತೆಗೆ ಕಂಪನಿಯ ನಿರ್ವಾಹಕರ (ಡೈರಕ್ಟರುಗಳ) ಪಟ್ಟಿಯನ್ನೂ ಅವರು ನಿರ್ವಾಹಕರಾಗಿರಲು ನೀಡಿರುವ ಲಿಖಿತ ಒಪ್ಪಿಗೆಯನ್ನೂ ಕಂಪನಿಯ ಬಂಡವಾಳದ ಸೂಚಿತ ಮೌಲ್ಯದ ಪಟ್ಟಿಯನ್ನೂ ಕಂಪನಿಯನ್ನು ನಡೆಸಲು ಒಪ್ಪಿರುವ ಮ್ಯಾನೇಜಿಂಗ್ ಏಜೆಂಟರು ಅಥವಾ ಕಾರ್ಯದರ್ಶಿಗಳು ಅಥವಾ ಕೋಶಾಧಿಕಾರಿಗಳೊಂದಿಗೆ ಮಾಡಿಕೊಂಡಿರಬಹುದಾದ ಕರಾರನ್ನೂ ಜಾಯಿಂಟ್-ಸ್ಟಾಕ್ ಕಂಪನಿಗಳ ರಿಜಿಸ್ಟ್ರಾರರಿಗೆ ಸಲ್ಲಿಸಬೇಕು. ಕಂಪನಿಗಳ ಶಾಸನದ ವಿಧಿಗಳಿಗೂ ಅದಕ್ಕೊಳಪಟ್ಟ ನಿಬಂಧನೆಗಳಿಗೂ ಅನುಗುಣವಾಗಿ ಎಲ್ಲ ಕ್ರಮಗಳನ್ನೂ ಕೈಗೊಂಡಿದೆಯೆಂದು ಕಂಪನಿಯ ನಿರ್ವಾಹಕರ ಪೈಕಿ ಒಬ್ಬನೋ ತತ್ಸಮನಾದ ಬೇರಾವ ಅಧಿಕಾರಿಯೋ ಒಂದು ಹೇಳಿಕೆಯನ್ನು ಕೊಡಬೇಕು.
ಕಂಪನಿಯ ಪ್ರವರ್ತನೆಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನೂ ಅನುಸರಿಸಿದೆಯೆಂಬುದನ್ನು ಮನವರಿಕೆ ಮಾಡಿಕೊಂಡ ಮೇಲೆ ಕಂಪನಿಗಳ ರಿಜಿಸ್ಟ್ರಾರರು ಈ ಕಂಪನಿಯ ಹೆಸರನ್ನು ತಮ್ಮ ರಿಜಿಸ್ಟರಿನಲ್ಲಿ ದಾಖಲು ಮಾಡಿಕೊಳ್ಳುವರು. ಕಂಪನಿಯ ದಾಖಲುಪತ್ರವನ್ನು ಅಥವಾ ನೋಂದಣಿ ಪತ್ರವನ್ನು ಅಥವಾ ಜನ್ಮಪತ್ರವನ್ನು (ಸರ್ಟಿಫಿಕೇಟ್ ಆಫ್ ಇನ್ಕಾರ್ಪೊರೇಷನ್) ನೀಡುವರು. ಕಂಪÀನಿ ಜನ್ಮ ತಳೆಯುತ್ತದೆ. ಅದು ಖಾಸಗಿ ಕಂಪನಿಯಾಗಿದ್ದ ಪಕ್ಷದಲ್ಲಿ ಕೂಡಲೇ ನೇರವಾಗಿ ಉದ್ಯಮವನ್ನಾರಂಭಿಸಬಹುದು. ಅದು ಸಾರ್ವಜನಿಕ ಕಂಪನಿಯಾಗಿದ್ದರೆ ಅದಕ್ಕೆ ಆಗಲೇ ಉದ್ಯಮವನ್ನಾರಂಭಿಸುವ ಹಕ್ಕು ಬರುವುದಿಲ್ಲ. ಅದಕ್ಕೆ ಮುಂಚೆ ಪ್ರವರ್ತಕರು ಇನ್ನು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ವಿವರಣಪತ್ರ: ಪ್ರತಿಯೊಂದು ಸಾರ್ವಜನಿಕ ಕಂಪನಿಯೂ ಸಾರ್ವಜನಿಕರನ್ನು ಆ ಕಂಪನಿಯ ಬಂಡವಾಳ ಭಾಗಗಳಿಗೆ-ಎಂದರೆ ಷೇರುಗಳಿಗೆ-ಚಂದಾ ಸಲ್ಲಿಸಲು ಆಹ್ವಾನಿಸಬೇಕಾಗುತ್ತದೆ; ಕಂಪನಿಯ ಜನ್ಮವಾರ್ತೆಯನ್ನು ಪ್ರಚುರಪಡಿಸಬೇಕಾಗುತ್ತದೆ. ಇದಕ್ಕಾಗಿ ಅದು ಇನ್ನೊಂದು ದಾಖಲೆಯನ್ನು ರಚಿಸಿ ಅದನ್ನು ಸಾರ್ವಜನಿಕರಿಗೆ ನೀಡಬೇಕು. ಇದೇ ವಿವರಣಪತ್ರ. ಕಂಪನಿಯ ಭವಿಷ್ಯವನ್ನೂ ಅದರ ಷೇರುಗಳನ್ನು ಪಡೆಯುವುದರಿಂದ ಲಭಿಸುವ ಉಪಯೋಗಗಳನ್ನೂ ಅದರಲ್ಲಿ ವಿವರಿಸಲಾಗುತ್ತದೆ. ಸಂಘದ ಷರತ್ತುಗಳ ಲಿಖಿತದಲ್ಲಿರುವ ಅಂಶಗಳನ್ನೇ ಅಲ್ಲದೆ, ಸಾರ್ವಜನಿಕರು ಈ ಕಂಪನಿಯ ಷೇರುಗಳನ್ನು ಕೊಳ್ಳಬೇಕೆಂಬ ತೀರ್ಮಾನಕ್ಕೆ ಬರಲು ಅಗತ್ಯವಾದ ಎಲ್ಲ ವಿವರಗಳನ್ನೂ ಇದರಲ್ಲಿ ಕೊಟ್ಟಿರುತ್ತದೆ. ವಿವರಣಪತ್ರದಲ್ಲಿರುವ ಅಂಶಗಳು ಖಚಿತವಾಗಿರಬೇಕು. ಸತ್ಯವಾಗಿರಬೇಕು; ಅದರಲ್ಲಿ ಉತ್ಪ್ರೇಕ್ಷೆಯಿರಬಾರದು. ಸಾರ್ವಜನಿಕರು ತೀರ್ಮಾನಕ್ಕೆ ಬರಲು ಅಗತ್ಯವಾದ ಯಾವ ವಿಷಯವನ್ನೂ ಮುಚ್ಚಿಡಬಾರದು. ಭಾವೀ ಷೇರುದಾರರ ಮನಸ್ಸಿನಲ್ಲಿ ತಪ್ಪು ಕಲ್ಪನೆಗೆ ಎಡೆ ಕೊಡಬಹುದಾದ ರೀತಿಯಲ್ಲಿ ಅದು ಇರಬಾರದು. ಹಾಗೇನಾದರೂ ಆದ ಪಕ್ಷದಲ್ಲಿ ಸಂಬಂಧಪಟ್ಟವರು ಮುಂದೆ ಕಂಪನಿಯ ಮೇಲೆ ಕಟ್ಟಳೆ ನಡೆಸಬಹುದು. ಷೇರುಧನಕ್ಕಾಗಿ ಅವರು ಕೊಟ್ಟ ಹಣವನ್ನು ವಾಪಸ್ಸು ಕೊಡಬೇಕೆಂದು ಕೇಳಬಹುದು. ಆದ್ದರಿಂದ ಕಂಪನಿಯ ವಿವರಣಪತ್ರವನ್ನು ಬಹಳ ಎಚ್ಚರಿಕೆಯಿಂದ ರಚಿಸಬೇಕು. ಕಂಪನಿಯ ನಿರ್ವಾಹಕರು, ವ್ಯವಸ್ಥಾಪಕ ನಿರ್ವಾಹಕರು, ಕಂಪನಿ ನೀಡಲಿರುವ ವಿವಿಧ ಬಗೆಯ ಷೇರುಗಳು, ಈ ಷೇರುಗಳನ್ನು ಕೊಳ್ಳುವ ಭರವಸೆ ಕೊಟ್ಟಿರುವವರ (ಅಂಡರ್ರೈಟರ್ಸ್‌) ಹೆಸರುಗಳೇ ಮುಂತಾದ ವಿವರಗಳು. ಷೇರು ಕೊಳ್ಳಲು ಬಂiÀÄಸಿ ಅರ್ಜಿ ಸಲ್ಲಿಸಿದವರಿಗೆ ಷೇರು ಹಂಚುವುದಕ್ಕೆ (ಅಲಾಟ್) ಪುರ್ವಭಾವಿಯಾಗಿ ಕಂಪನಿಗೆ ಬಂದಿರಲೇಬೇಕಾದ ಕನಿಷ್ಠಚಂದಾಹಣ (ಮಿನಿಮಮ್ ಸಬ್ಸ್ಕ್ರಿಪ್ಷನ್), ಕಂಪನಿ ಕೊಂಡ ಸ್ವತ್ತನ್ನು ಅದಕ್ಕೆ ಮಾರಿದವರ ಹೆಸರುಗಳು, ಆ ಸ್ವತ್ತಿನ ಬೆಲೆಯನ್ನು ಅವರಿಗೆ ಕೊಡುವ ವಿಧಾನ, ಕಂಪನಿಯ ಸ್ಥಾಪನೆಯ ಸಂದರ್ಭದಲ್ಲಿ ಅಗತ್ಯವಾದ ಪುರ್ವಭಾವಿ ಖರ್ಚುಗಳು (ಪ್ರಿಲಿಮಿನರಿ ಎಕ್ಸ್‌ಪೆನ್ಸಸ್) ಕಂಪನಿಯ ನಿರ್ವಾಹಕರಿಗೆ ಕಂಪನಿಯಲ್ಲಿರಬಹುದಾದ ವಿಶೇಷ ಹಿತಾಸಕ್ತಿಗಳು ಮುಂತಾದ ವಿವರಗಳೂ ಇದರಲ್ಲಿ ಅಡಕವಾಗಿರುತ್ತವೆ. ಕಂಪನಿಯ ನಿರ್ವಾಹಕರು (ಅಥವಾ ನಿರ್ವಾಹಕರಾಗಲಿರುವವರ) ಸಹಿ ಹಾಕಿ, ದಿನಾಂಕವನ್ನೂ ಹಾಕಬೇಕು. ಇದನ್ನು ಕಂಪನಿಗಳ ರಿಜಿಸ್ಟ್ರಾರರಿಗೆ ಸಲ್ಲಿಸಬೇಕು. ವಿವರಣಪತ್ರವನ್ನು ಸಲ್ಲಿಸಬೇಕಾದುದಿಲ್ಲವೆಂದು ಕಂಪನಿ ತೀರ್ಮಾನಿಸಿದ ಪಕ್ಷದಲ್ಲಿ, ವಿವರಣಪತ್ರದ ಬದಲು ಒಂದು ತಃಖ್ತೆಯನ್ನು (ಸ್ಟೇಟ್ಮೆಂಟ್ ಇನ್ನ ಲ್ಯೂ ಆಫ್ ಪ್ರಾಸ್ಪೆಕ್ಟಸ್) ತಯಾರಿಸಿ ಎಲ್ಲ ನಿರ್ವಾಹಕರೂ ಇದಕ್ಕೆ ಸಹಿ ಹಾಕಿ, ಇದನ್ನೇ ರಿಜಿಸ್ಟ್ರಾರರಿಗೆ ಸಲ್ಲಿಸಬೇಕು.
ಷೇರುಗಳ ಹಂಚಿಕೆ (ಅಲಾಟ್ಮೆಂಟ್): ವಿವರಣಪತ್ರವನ್ನು ಪ್ರಕಟಿಸಿದ ಮೇಲೆ ಸಾರ್ವಜನಿಕರಿಂದ ಅರ್ಜಿಗಳು ಬರುತ್ತವೆ. ಈ ಅರ್ಜಿಗಳೊಂದಿಗೆ, ಅವರು ಪಡೆಯಬಂiÀÄಸುವ ಷೇರುಗಳ ಸಂಖ್ಯೆಗೆ ಅನುಗುಣವಾಗಿ ಆ ಷೇರುಗಳ ಒಂದು ಗೊತ್ತಾದ ಪ್ರಮಾಣದ ಹಣವನ್ನೂ ಅವರು ಸಲ್ಲಿಸಬೇಕಾಗುತ್ತದೆ. ವಿವರಣಪತ್ರದಲ್ಲಿ ನಮೂದಿಸಿರುವಂತೆ ಕಂಪನಿಗೆ ಕನಿಷ್ಠ ಚಂದಾಹಣ ಬಂದಿದ್ದರೆ ಆಗ ಅದರ ನಿರ್ವಾಹಕರು ಕಂಪನಿ ನೀಡಿರುವ ಷೇರುಗಳನ್ನು ಅಭ್ಯರ್ಥಿಗಳಿಗೆ ಹಂಚುವ ಕಾರ್ಯ ಕೈಗೊಳ್ಳುತ್ತಾರೆ. ಇದಕ್ಕಾಗಿ ನಿರ್ವಾಹಕರ ಒಂದು ಸಭೆ ಸೇರುತ್ತದೆ. ಷೇರುಗಳಿಗಾಗಿ ಬಂದಿರುವ ಎಲ್ಲ ಅರ್ಜಿಗಳನ್ನೂ ಕಂಪನಿಯ ಕಾರ್ಯದರ್ಶಿ ಈ ಸಭೆಯ ಮುಂದೆ ಇಡುತ್ತಾನೆ. ಕಂಪನಿ ನೀಡಿರುವ ಷೇರುಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದರೆ ಕೆಲವು ಅಭ್ಯರ್ಥಿಗಳಿಗೆ ನಿವಾರ್ಹಕರು ಷೇರುಗಳನ್ನು ನಿರಾಕರಿಸಬೇಕಾಗುತ್ತದೆ. ಅಥವಾ ಅವರು ಕೇಳಿರುವುದಕ್ಕಿಂತ ಕಡಿಮೆ ಸಂಖ್ಯೆಯ ಷೇರುಗಳನ್ನು ಹಂಚಬೇಕಾಗುತ್ತದೆ. ಯಾರಿಗೆ ಷೇರುಗಳನ್ನು ಹಂಚಲಾಗುವುದಿಲ್ಲವೋ ಅವರಿಗೆ ಷೇರುಗಳನ್ನು ಕೊಡಲಾಗದುದಕ್ಕಾಗಿ ವಿಷಾದ ಸೂಚಿಸಿ ಪತ್ರವನ್ನೂ (ಲೆಟರ್ ಆಫ್ ರಿಗ್ರೆಟ್) ಯಾರಿಗೆ ಷೇರುಗಳನ್ನು ಹಂಚಲಾಗುವುದೋ ಅವರಿಗೆ ಷೇರುಹಂಚಿಕೆ ಪತ್ರವನ್ನೂ (ಲೆಟರ್ ಆಫ್ ಅಲಾಟ್ಮೆಂಟ್) ಕಳುಹಿಸಲಾಗುವುದು. ಯಾರಿಗೆ ಷೇರು ಹಂಚಿದೆಯೋ ಅವರು ಆ ಹಂಚಿಕೆ ಪತ್ರದಲ್ಲಿ ಸೂಚಿಸಿರುವಷ್ಟು ಹಣವನ್ನು ಒಂದು ಗೊತ್ತಾದ ಅವಧಿಯಲ್ಲಿ ಕಳುಹಿಸಕೊಡಬೇಕಾಗುವುದು. ಇದು ಷೇರುಧನಕ್ಕಾಗಿ ಕೊಡುವ ಎರಡನೆಯ ಕಂತು. ಷೇರಿನ ಮೇಲೆ ಉಳಿದ ಹಣವನ್ನು ಕಂತುಗಳಾಗಿಯೋ ಇಲ್ಲವೇ ಒಟ್ಟಾಗಿಯೋ, ವಿವರಣ ಪತ್ರದಲ್ಲಿ ಸೂಚಿಸಿರುವಂತೆ, ವಸೂಲು ಮಾಡುವ ಹಕ್ಕು ಕಂಪನಿಗೆ ಇರುತ್ತದೆ.

ಯಾರಿಗೆ ಷೇರುಗಳನ್ನು ಕೊಡಲಾಗುವುದಿಲ್ಲವೋ ಅವರಿಗೆ ಅವರು ಕಳುಹಿಸಿರುವ ಹಣವನ್ನು ವಾಪಸ್ಸು ಕೊಡಬೇಕಾಗುತ್ತದೆ. ಅಭ್ಯರ್ಥಿಗಳಲ್ಲಿ ಯಾರಿಗಾದರೂ ಷೇರುಹಂಚುವ ಅಥವಾ ಹಂಚದಿರುವ ಅಧಿಕಾರವನ್ನು ಸಾಮಾನ್ಯವಾಗಿ ನಿರ್ವಾಹಕರು ಹೊಂದಿರುತ್ತಾರೆ.
ಕಂಪನಿಯ ವಿವರಣಪತ್ರವನ್ನು ಹೊರಡಿಸಿದ ನೂರಿಪ್ಪತ್ತು ದಿನಗಳೊಳಗಾಗಿ ಆ ಪತ್ರದಲ್ಲಿ ನಮೂದಿಸಿರುವ ಕನಿಷ್ಠ ಚಂದಾಹಣ ಬಾರದಿದ್ದರೆ, ಅರ್ಜಿದಾರರಿಂದ ಬಂದಿರುವ ಎಲ್ಲ ಹಣವನ್ನೂ ಕೂಡಲೇ ಅವರಿಗೆ ಹಿಂತಿರುಗಿಸಬೇಕೆಂಬುದಾಗಿ ಕಂಪನಿಗಳ ಕಾಯಿದೆ ವಿಧಿಸುತ್ತದೆ. ಅನಂತರವೂ ಹತ್ತು ದಿನಗಳ ಒಳಗಾಗಿ ಅದನ್ನು ಹಿಂತಿರುಗಿಸದಿದ್ದರೆ ವರ್ಷಕ್ಕೆ ಶೇ. 6ರ ಹಾಗೆ ಬಡ್ಡಿಯೊಂದಿಗೆ ಅದನ್ನು ಕೊಡಬೇಕಾಗುತ್ತದೆ.		

ಮೇಲೆ ಸೂಚಿಸಿದ ರೀತಿಯಲ್ಲಿ ಸಾರ್ವಜನಿಕರಿಗೆ ಷೇರುಗಳನ್ನು ಹಂಚಿ ಆದಮೇಲೆ ಕಂಪನಿಯ ಕಾರ್ಯದರ್ಶಿಯೋ ನಿರ್ವಾಹಕನೋ ಈ ಬಗೆಗೆ ಕಂಪನಿಗಳ ರಿಜಿಸ್ಟ್ರಾರರಿಗೆ ಒಂದು ತಃಖ್ತೆಯನ್ನು ಒಪ್ಪಿಸುತ್ತಾನೆ. ಹಂಚಿದ ಷೇರುಗಳ ಸಂಖ್ಯೆ ಮುಂತಾದ ವಿವರಗಳನ್ನು ಇದರಲ್ಲಿ ಕೊಡಬೇಕು. ಈ ವಿಚಾರದಲ್ಲಿ ಕಂಪನಿಯ ಶಾಸನಗಳಲ್ಲಿ ನಿಯಮಿಸಿರುವ ಎಲ್ಲ ವಿಧಿಗಳನ್ನೂ ಅನುಸರಿಸಲಾಗಿದೆಯೆಂದು ಒಂದು ಹೇಳಿಕೆಯನ್ನು ನೀಡಬೇಕು. ಎಲ್ಲವೂ ವಿಧಿಬದ್ಧವಾಗಿ ಅನುಸರಿಸಲ್ಪಟ್ಟಿದೆಯೆಂದು ರಿಜಿಸ್ಟ್ರಾರರಿಗೆ ಮನವರಿಕೆಯಾದರೆ ಆಗ ಅವರು ವ್ಯವಹಾರವನ್ನಾರಂಭಿಸಲು ಅಪ್ಪಣೆ ಪತ್ರವನ್ನು ನೀಡುತ್ತಾರೆ. ಇದನ್ನು ನೀಡಿದ ದಿನದಿಂದ ಮಾತ್ರವೇ ಸಾರ್ವಜನಿಕ ಕಂಪನಿ ವ್ಯವಹಾರ ಆರಂಭಿಸಬಹುದಾಗಿದೆ.		ಖಾಸಗಿ ಕಂಪನಿಗೆ ಈ ಅಪ್ಪಣೆ ಪತ್ರದ ಅಗತ್ಯವಿಲ್ಲ. ನೋಂದಣಿ ಪತ್ರವನ್ನು ಪಡೆದಕೂಡಲೇ ಅದು ಷೇರುಗಳನ್ನು ಹಂಚಿ ನೇರವಾಗಿ ವ್ಯವಹಾರವನ್ನಾರಂಭಿಸಬಹುದಾಗಿದೆ.

 ಷೇರುಗಳ ಒಟ್ಟು ಕೊಳ್ಳಿಕೆ ಭರವಸೆ 
ಒಂದು ಕಂಪನಿಯ ಷೇರುಗಳನ್ನು ಕೊಳ್ಳಲು ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಮುಂದೆ ಬಂದೇಬರುವರೆಂಬ ಭರವಸೆ ಯಾವಾಗಲೂ ಇರುವುದಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಇವು ಮಾರಾಟವಾಗಲಿಲ್ಲವೆಂಬ ಕಾರಣದಿಂದ ಕಂಪನಿಯನ್ನು ಪ್ರಾರಂಭ ಮಾಡಲು ಸಾಧ್ಯವಾಗದೆ ಹೋಗಬಹುದು. ಇಂಥ ಅನಿಶ್ಚಯಕರ ಪರಿಸ್ಥಿತಿಯನ್ನು ಹೋಗಲಾಡಿಸಲು ಪ್ರವರ್ತಕರು ಷೇರುಗಳ ಒಟ್ಟು ಕೊಳ್ಳಿಕೆ ಭರವಸೆ ಒಪ್ಪಂದ (ಅಂಡರ್-ರೈಟಿಂಗ್ ಆಫ್ ಷೇರ್ಸ್‌) ಮಾಡಿಕೊಳ್ಳಬಹುದು. ಯಾರಾದರೂ ದಳ್ಳಾಳಿಯೋ ಯಾವುದಾದರೂ ಬ್ಯಾಂಕೋ ಷೇರುಗಳನ್ನು ಕೊಳ್ಳುವ ಭರವಸೆ ನೀಡಲು ಒಪ್ಪಬಹುದು. ಕಂಪನಿ ನೀಡುತ್ತಿರುವ ಷೇರುಗಳಲ್ಲಿ ಎಲ್ಲವನ್ನೋ ಅಥವಾ ಒಂದು ಗೊತ್ತಾದ ಸಂಖ್ಯೆಯನ್ನೋ ಸೂಚಿಸಿ, ಈ ಸಂಖ್ಯೆಯ ಷೇರುಗಳೆಲ್ಲವನ್ನೂ ಮಾರಾಟ ಮಾಡದಿದ್ದ ಪಕ್ಷದಲ್ಲಿ ಹಾಗೆ ಮಾರಾಟ ಮಾಡದೆ ಉಳಿದ ಷೇರುಗಳನ್ನು ಕೊಳ್ಳಲು ಭರವಸೆ ನೀಡಬಹುದು. ಎಲ್ಲ ಷೇರುಗಳೂ ಮಾರಾಟವಾದ ಪಕ್ಷದಲ್ಲಿ ಇವರು ಷೇರುಗಳನ್ನು ಕೊಳ್ಳಬೇಕಾದುದಿಲ್ಲ. ಅಂತೂ ಹೀಗೆ ಒಪ್ಪಂದ ಮಾಡಿಕೊಂಡ ಒಟ್ಟು ಷೇರುಗಳ ಮೇಲೆ ಇವರು ನೀಡಿದ ಭರವಸೆಗಾಗಿ ಇವರಿಗೆ ನಿಗದಿ ಮಾಡಿದ ಕಮಿಷನ್ ಕೊಡಬೇಕಾಗುತ್ತದೆ. ಈ ಕಮಿಷನಿಗೆ ಕೊಳ್ಳಿಕೆ ಭರವಸೆ ಕಮಿಷನ್ (ಅಂಡರ್-ರೈಟಿಂಗ್ ಕಮಿಷನ್) ಎಂದು ಹೆಸರು.		

 ಕಂಪನಿಯ ಬಂಡವಾಳ 
ಒಂದು ಕಂಪನಿ ತನ್ನ ಉದ್ಯಮಕ್ಕೆ ಅಗತ್ಯವಾದ ಬಂಡವಾಳವನ್ನು ಷೇರುಧನದ ರೂಪದಲ್ಲಿ ಸದಸ್ಯರಿಂದ ಪಡೆಯುತ್ತದೆಯಷ್ಟೆ, ಅದು ಹೊಂದಿರಬಹುದಾದ ಪರಮಾವಧಿ ಬಂಡವಾಳದ ಹಣವನ್ನು ಸಂಘದ ಷರತ್ತುಗಳಲ್ಲಿ ನಮೂದಿಸಿರುತ್ತದೆ. ಇದಕ್ಕಿಂತ ಹೆಚ್ಚು ಬಂಡವಾಳವನ್ನು ಕಂಪನಿ ಹೊಂದಿರತಕ್ಕದ್ದಲ್ಲ. ಕಂಪನಿಯ ರಿಜಿಸ್ಟ್ರಾರರಿಂದ ಅಪ್ಪಣೆ ಪಡೆದ ಈ ಪರಮಾವಧಿ ಬಂಡವಾಳಕ್ಕೆ ಅಧಿಕೃತ್ಯ ಬಂಡವಾಳ, ಸೂಚಿತ ಬಂಡವಾಳ ಅಥವಾ ನೋಂದಣಿಯಾದ ಬಂಡವಾಳ (ಆಥರೈಸ್ಡ್‌ ಕ್ಯಾಪಿಟಲ್; ರಿಜಿಸ್ಟರ್ಡ್ ಕ್ಯಾಪಿಟಲ್) ಎಂದು ಹೆಸರು.
ಇಷ್ಟು ಬಂಡವಾಳವೂ ಕಂಪನಿಗೆ ಆಗಲೇ ಬೇಡದೆ ಇರಬಹುದು. ಅದರ ಉದ್ಯಮಕ್ಕೆ ಸದ್ಯಕ್ಕೆ ಎಷ್ಟು ಬಂಡವಾಳ ಬೇಕೋ ಅಷ್ಟನ್ನು ಮಾತ್ರ ಸಾರ್ವಜನಿಕರಿಂದ ಚಂದಾ ಬಂiÀÄಸಿ ಅವರಿಗೆ ನೀಡಬಹುದು. ವಿವರಣಪತ್ರದ ಪ್ರಕಟನೆಯ ಮೂಲಕ ಹೀಗೆ ಸಾರ್ವಜನಿಕರಿಗೆ ನೀಡಿರುವ ಬಂಡವಾಳಕ್ಕೆ ನೀಡಿದ ಬಂಡವಾಳ ಅಥವಾ ಪ್ರಕಟಿತ ಬಂಡವಾಳ ಎಂದು ಹೆಸರು (ಇಷ್ಯೂಡ್ ಕ್ಯಾಪಿಟಲ್).	ಕಂಪನಿ ನೀಡಿದ ಬಂಡವಾಳದಲ್ಲಿ ಅಷ್ಟಕ್ಕೂ ಸಾರ್ವಜನಿಕರಿಂದ ಅರ್ಜಿ ಬರಬಹುದು, ಬಾರದಿರಬಹುದು. ಸಾರ್ವಜನಿಕರು ಎಷ್ಟಕ್ಕೆ ಅರ್ಜಿಸಲ್ಲಿಸುತ್ತಾರೋ ಅಷ್ಟನ್ನು ಮಾತ್ರ ಕಂಪನಿ ಅವರಿಗೆ ಷೇರುಗಳ ರೂಪದಲ್ಲಿ ಹಂಚಬೇಕಾಗುತ್ತದೆ. ಹೀಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದ ಬಂಡವಾಳಕ್ಕೆ ಕೂಡಿಸಿದ ಬಂಡವಾಳ ಅಥವಾ ಚಂದಾ ಆದ ಬಂಡವಾಳ (ಸಬ್ಸ್ಕ್ರೈಬ್ಡ್‌ ಕ್ಯಾಪಿಟಲ್) ಎಂದು ಹೆಸರು.

ಹೀಗೆ ಕೂಡಿಸಿದ ಬಂಡವಾಳದಲ್ಲಿ ಸದಸ್ಯರು ಅಥವಾ ಷೇರುದಾರರು ಕೊಡಬೇಕೆಂದು ಕಂಪನಿಯ ನಿರ್ವಾಹಕರು ಕೇಳಿರುವ ಭಾಗಕ್ಕೆ ಆಹ್ವಾನಿತ ಬಂಡವಾಳ (ಕಾಲ್ಡ್-ಅಪ್-ಕ್ಯಾಪಿಟಲ್) ಎಂದು ಹೆಸರು. ಇದರಲ್ಲಿ ಷೇರುದಾರರು ಪಾವತಿ ಮಾಡಿರುವ ಬಂಡವಾಳಕ್ಕೆ ಸಂದಾಯವಾದ ಬಂಡವಾಳ (ಪೇಡ್-ಅಪ್ ಕ್ಯಾಪಿಟಲ್) ಎಂದು ಹೆಸರು.

 ಷೇರುಗಳು 
ಒಂದು ಕಂಪನಿಯ ಬಂಡವಾಳದ ಹಣವನ್ನು ಅನೇಕ ಮಂದಿ ಸದಸ್ಯರಿಂದ ಕೂಡಿಸಲಾಗುತ್ತದೆ. ಇದಕ್ಕಾಗಿ ಬಂಡವಾಳವನ್ನು ಸಮನಾದ ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದೊಂದು ಭಾಗಕ್ಕೂ ಷೇರು ಎಂದು ಹೆಸರು. ಷೇರು ಕಂಪನಿಯ ಬಂಡವಾಳದ ಕನಿಷ್ಟ ಭಾಗ. ಇದನ್ನು ಮತ್ತೆ ತುಂಡರಿಸಲುಬಾರದು. ಹಣ ಕೊಟ್ಟು ಈ ಷೇರುಗಳನ್ನು ಪಡೆದಿರುವವರೇ ಷೇರುದಾರರು ಅಥವಾ ಕಂಪನಿಯ ಸದಸ್ಯರು. ಒಬ್ಬ ಷೇರುದಾರ ಒಂದಕ್ಕಿಂತ ಹೆಚ್ಚು ಷೇರುಗಳನ್ನು ಹೊಂದಿರಲು ಯಾವ ಅಭ್ಯಂತರವೂ ಇಲ್ಲ.		ಷೇರುಗಳಲ್ಲಿ ನಾನಾ ವಿಧ. ಭಾರತದ ಕಂಪನಿಗಳ ಕಾಯಿದೆಯ (1956) ರೀತ್ಯಾ 1956ರಿಂದ ಈಚೆಗೆ ಭಾರತದಲ್ಲಿ ಕಂಪನಿಗಳು ನೀಡಬಹುದಾದ ಷೇರುಗಳಲ್ಲಿ ಎರಡು ಬಗೆ: 
 ಮೊದಲ ಹಕ್ಕಿನ ಷೇರುಗಳು (ಪ್ರಿಫರೆನ್ಸ್‌ ಷೇರ್ಸ್‌)
 ಸಮಾನ ಹಕ್ಕುಗಳ ಷೇರುಗಳು (ಎಕ್ವಿಟಿ ಷೇರ್ಸ್‌)
ಮೊದಲ ಹಕ್ಕಿನ ಷೇರುಗಳ ಒಡೆಯರಿಗೆ ಕೆಲವು ವಿಶಿಷ್ಟವಾದ ಹಕ್ಕುಗಳಿರುತ್ತವೆ. ಕಂಪನಿ ಲಾಭ ಗಳಿಸಿದಾಗ ಆ ಹಣವನ್ನು ಮೊದಲು ಈ ಷೇರುದಾರರಿಗೆ ಕೊಡಲು ಒಪ್ಪಿರುವ ದರದಲ್ಲಿ ಲಾಭಾಂಶವನ್ನು (ಡಿವಿಡೆಂಡ್) ಹಂಚಿ, ಉಳಿದ ಲಾಭವನ್ನು (ಉಳಿದಿದ್ದರೆ) ಇತರ ಷೇರುದಾರರಿಗೆ ಹಂಚಬೇಕು. ಅಥವಾ ಕಂಪನಿಯನ್ನು ಮುಚ್ಚಬೇಕಾದ ಸಂದರ್ಭದಲ್ಲಿ, ಕಂಪನಿಯ ಆಸ್ತಿಯಿಂದ ಅದು ಕೊಡಬೇಕಾದ ಋಣಗಳನ್ನೆಲ್ಲ ತೀರಿಸಿ ಆದಮೇಲೆ ಉಳಿದ ಹಣದಲ್ಲಿ ಮೊದಲು ಈ ಷೇರುದಾರರ ಷೇರು ಹಣವನ್ನು ಹಿಂದಿರುಗಿಸಬೇಕು. ಇವೆರಡರಲ್ಲಿ ಯಾವುದಾದರೂ ಒಂದು ಹಕ್ಕನ್ನಾಗಲಿ ಎರಡು ಹಕ್ಕುಗಳನ್ನೂ ಆಗಲಿ ಹೊಂದಿರುವ ಷೇರುಗಳೇ ಮೊದಲ ಹಕ್ಕಿನ ಷೇರುಗಳು.

ಒಂದು ವರ್ಷದಲ್ಲಿ ಮೊದಲ ಹಕ್ಕಿನ ಷೇರುದಾರರಿಗೆ ಗೊತ್ತಾದ ದರದಲ್ಲಿ ಲಾಭಾಂಶ ಹಂಚುವಷ್ಟು ಲಾಭವನ್ನು ಕಂಪನಿ ಗಳಿಸದಿದ್ದರೆ, ಹಾಗೆ ಹಂಚಲು ಸಾಧ್ಯವಾಗದೆ ಹೋದ ಹಣವನ್ನು ಬಾಕಿಯಾಗಿ ಪರಿಗಣಿಸಿ, ಮುಂದೆ ಲಾಭಗಳಿಸಿದಾಗ ಈ ಬಾಕಿಯನ್ನು ಸೇರಿಸಿ ಕೊಡಬೇಕೆಂಬ ಷರತ್ತೂ ಈ ಮೊದಲ ಹಕ್ಕಿನ ಷೇರುಗಳಿಗೆ ಇರಬಹುದು. ಇಂಥ ಷರತ್ತು ಇಲ್ಲದಿದ್ದ ಪಕ್ಷದಲ್ಲಿ ಆಯಾ ವರ್ಷಗಳ ಲಾಭಾಂಶದ ಹಕ್ಕು ಆಯಾ ವರ್ಷಗಳಿಗೆ ಮುಕ್ತಾಯವಾಗುತ್ತದೆ. ಒಂದು ವರ್ಷ ಕೊಡಲಾಗದೆ ಹೋದ ಲಾಭಾಂಶವನ್ನು ಮುಂದಿನ ವರ್ಷಕ್ಕೆ ಬಾಕಿಯೆಂದು ಪರಿಗಣಿಸುವುದಿಲ್ಲ.		

ಸಮಾನಹಕ್ಕುಗಳ ಷೇರುಗಳ ಒಡೆಯರಿಗೆ ಯಾವ ವಿಶಿಷ್ಟ ಹಕ್ಕುಗಳೂ ಇರುವುದಿಲ್ಲ. ಮೊದಲ ಹಕ್ಕಿನ ಷೇರುಗಳ ಮೇಲೆ ಲಾಭಾಂಶ ಹಂಚಿದ ಮೇಲೆ ಉಳಿದ ಲಾಭದ ಹಣವನ್ನು ಸಮಾನ ಹಕ್ಕುಗಳ ಷೇರುದಾರರಿಗೆ ಹಂಚಬಹುದು. ಕಂಪನಿ ಸಾಕಷ್ಟು ಲಾಭಗಳಿಸದೆ ಹೋದರೆ ಇವರಿಗೆ ಏನೂ ಲಾಭಾಂಶವೇ ದೊರಕದೆ ಹೋಗಬಹುದು. ಕಂಪನಿ ಅಧಿಕ ಲಾಭ ಗಳಿಸಿದಾಗ ಇವರಿಗೆ ಹೆಚ್ಚು ಲಾಭಾಂಶವೂ ದೊರಕಬಹುದು. ಕಂಪನಿಯನ್ನು ಮುಚ್ಚಿದ ಸಂದರ್ಭದಲ್ಲಿ ಬಂಡವಾಳಕ್ಕೆ ಸಂಬಂಧಿಸಿದಂತೆ ಮೊದಲ ಹಕ್ಕು ಪಡೆದಿರುವ ಷೇರುದಾರರ ಬಂಡವಾಳವನ್ನು ಹಿಂದಿರುಗಿಸಿದ ಮೇಲೆ ಮಾತ್ರವೇ ಸಮಾನ ಹಕ್ಕುಗಳ ಷೇರುದಾರರಿಗೆ ಅವರ ಬಂಡವಾಳದ ಹಣವನ್ನು ಹಿಂದಿರುಗಿಸಲಾಗುವುದು.
ಕಂಪನಿಯ ಸಭೆಗಳು: ಕಂಪನಿಯ ಆಡಳಿತದ ಜವಾಬ್ದಾರಿ ಇರತಕ್ಕದ್ದು ನಿರ್ವಾಹಕ ಮಂಡಳಿಯ ವಶದಲ್ಲಿ. ಕಂಪನಿಯ ಸದಸ್ಯರೇ ಈ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ಕಂಪನಿಯ ಸದಸ್ಯರು ನಿರ್ವಾಹಕ ಮಂಡಳಿಗೆ ಕಂಪನಿಯ ನಿರ್ವಹಣೆಯ ಜವಾಬ್ದಾರಿ ನೀಡುತ್ತಾರೆ. ಅಂತೂ ಕಂಪನಿಯ ಸದಸ್ಯರದೇ ಪರಮಾಧಿಕಾರ. ಆದ್ದರಿಂದ ಈ ಅಧಿಕಾರದ ಚಲಾವಣೆ ಸರಿಯಾದ ರೀತಿಯಲ್ಲಿ ಆಗಬೇಕಾದರೆ ಷೇರುದಾರರು ಆಗಿಂದಾಗ್ಗೆ ಒಟ್ಟಿಗೆ ಸೇರಿ, ಕಂಪನಿಗೆ ಸಂಬಂಧಪಟ್ಟ ಮುಖ್ಯ ವಿಚಾರಗಳನ್ನು ಪರಿಶೀಲಿಸಿ, ಚರ್ಚೆ ನಡೆಸಿ, ನಿರ್ಣಯಗಳ ರೂಪದಲ್ಲಿ ತೀರ್ಮಾನ ಕೈಕೊಳ್ಳಬೇಕಾಗುತ್ತದೆ. ಕಂಪನಿಯ ಸದಸ್ಯರಿಂದ ಆಯ್ಕೆಯಾದ ನಿರ್ವಾಹಕರೂ ಆಗಿಂದಾಗ್ಗೆ ಒಂದಾಗಿ ಸೇರಿ ಕಂಪನಿಯ ದಿನದಿನದ ವ್ಯವಹಾರಗಳನ್ನು ಕುರಿತು ಚರ್ಚೆ ನಡೆಸಿ, ನಿರ್ಣಯಿಸಿ, ಕಂಪನಿಯ ವ್ಯವಸ್ಥಾಪಕ ವರ್ಗಕ್ಕೆ ಸೂಕ್ತವಾದ ಸೂಚನೆಗಳನ್ನು ಕೊಡುತ್ತಿರಬೇಕಾಗುತ್ತದೆ. ಹೀಗೆ ಇವರು ಸಮಾಲೋಚನೆ ನಡೆಸಿ ನಿರ್ಣಯಗಳನ್ನು ಅಂಗೀಕರಿಸುವ ಸಲುವಾಗಿ ಒಂದಾಗಿ ಸೇರಿದರೆ ಅಂಥ ಕೂಟವನ್ನು ಸಭೆಯೆಂದು ಕರೆಯಬಹುದು.

ಕಂಪನಿಯ ಸಭೆಗಳು ಮುಖ್ಯವಾಗಿ ಎರಡು ವಿಧ : 1 ನಿರ್ವಾಹಕ ಮಂಡಳಿಯ ಸಭೆ, 2 ಷೇರುದಾರರ ಸಭೆ, ಕನಿಷ್ಠ ಪಕ್ಷ ಮೂರು ತಿಂಗಳಿಗೊಮ್ಮೆಯಾದರೂ ನಿರ್ವಾಹಕಮಂಡಲಿಯ ಸಭೆ ಸೇರಬೇಕು. ಮಂಡಳಿಯ ಎಲ್ಲ ಸದಸ್ಯರಿಗೂ ಸಭೆಯ ತಿಳಿವಳಿಕೆ ಪತ್ರ ಕಳಿಸಬೇಕು. ಇಲ್ಲದಿದ್ದರೆ ಅಂಥ ಸಭೆಗೆ ಕಾನೂನಿನ ಬಲ ಇರುವುದಿಲ್ಲ. ಆ ಸಭೆಯಲ್ಲಿ ನಡೆಸಿದ ಕಲಾಪಗಳು ನಿರರ್ಥಕವಾಗುತ್ತವೆ. ಮಂಡಳಿಯ ಸಭೆಯಲ್ಲಿ ಕನಿಷ್ಠ ಪಕ್ಷ ಇಷ್ಟು ಮಂದಿ ಸದಸ್ಯರು ಇರಬೇಕೆಂಬುದು ಕಂಪನಿಯ ಸಂಘದ ಷರತ್ತುಗಳಲ್ಲಿ ಉಲ್ಲೇಖವಾಗಿರುತ್ತದೆ. ಈ ಸಂಖ್ಯೆಯೇ ಕೋರಂ (ಆವಶ್ಯ ಸಂಖ್ಯೆ). ಕೋರಂ ಇಲ್ಲದ ಸಭೆಯ ಕಲಾಪಗಳು ಊರ್ಜಿತವಾಗುವುದಿಲ್ಲ. ಮಂಡಳಿಯ ತೀರ್ಮಾನಗಳೂ ನಿರ್ಣಯಗಳ ರೂಪದಲ್ಲಿರುತ್ತವೆ. ಇವನ್ನು ಕಂಪನಿಯ ಕಲಾಪಗಳ ಪುಸ್ತಕದಲ್ಲಿ ಬರೆದು ಸಭೆಯ ಅಧ್ಯಕ್ಷರ ಸಹಿಪಡೆಯಬೇಕು. ಮುಂಚೆಯೇ ಗೊತ್ತಾದ ಕಾರ್ಯಸೂಚಿಯ ಪ್ರಕಾರ ಸಭೆಯ ಕಲಾಪಗಳು ನಡೆಯಬೇಕು. ಸಭೆಯಲ್ಲಿ ನಡೆದ ಕಲಾಪಗಳನ್ನು ನಡೆವಳಿಕೆಯ ಪುಸ್ತಕದಲ್ಲಿ ಬರೆದಿಡುವಂತೆ, ಅದರ ಕಾರ್ಯಸೂಚಿಯನ್ನು ಕಂಪನಿಯ ಕಾರ್ಯದರ್ಶಿ ಕಂಪನಿಯ ಅಧ್ಯಕ್ಷರೊಂದಿಗೆ ಸಮಾಲೋಚನೆ ನಡೆಸಿ ತಯಾರಿಸುತ್ತಾನೆ. ಇದರ ಪ್ರತಿಗಳನ್ನು ಮಂಡಳಿಯ ಸದ್ಯಸರಿಗೆ, ಅವರಿಗೆ ಕಳುಹಿಸುವ ಸಭೆಯ ತಿಳಿವಳಿಕೆ ಪತ್ರದೊಂದಿಗೆ, ಕಳುಹಿಸಿಕೊಡಬೇಕು. ಇದು ಕಾರ್ಯದರ್ಶಿಯ ಕರ್ತವ್ಯ ಸಭೆಯಲ್ಲಿ ಹಾಜರಿದ್ದ ಸದಸ್ಯರ ಹೆಸರು, ಸಭೆಯಲ್ಲಿ ನಡೆಸಿದ ಚರ್ಚೆ, ಸ್ವೀಕರಿಸಿದ ಗೊತ್ತುವಳಿಗಳು ಇವುಗಳೆಲ್ಲ ನಡೆವಳಿಕೆಯ ಪುಸ್ತಕದಲ್ಲಿ ಇರಬೇಕು. ಪ್ರತಿಯೊಂದು ಸಭೆಯಲ್ಲೂ ಕಾರ್ಯದರ್ಶಿ ಹಾಜರಿರುತ್ತಾನೆ. ಅಲ್ಲಿ ನಡೆದ ಕಲಾಪಗಳ ಟಿಪ್ಪಣಿ ಮಾಡಿಕೊಂಡು ಅದರ ಆಧಾರದ ಮೇಲೆ ನಡೆವಳಿಕೆಯನ್ನು ಬರೆಯುತ್ತಾನೆ. ಮುಂದಣ ಸಭೆಯಲ್ಲಿ ಹಿಂದಣ ಸಭೆಯ ನಡೆವಳಿಕೆಯನ್ನು ಓದಿ, ಅದು ಸರಿಯಾಗಿದೆಯೆಂದು, ಸಭೆಯ ಒಪ್ಪಿಗೆ ಪಡೆಯಬೇಕು. ಹಿಂದಣ ನಡೆವಳಿಕೆಯ ಪಠಣ ಮತ್ತು ಒಪ್ಪಿಗೆ ಎಂಬುದೇ ಸಭೆಯ ಕಾರ್ಯಸೂಚಿಯ ಮೊದಲನೆಯ ಕಲಾಪ.
ಕಂಪನಿಯ ಷೇರುದಾರರ ಸಭೆಗಳು ಮೂರು ವಿಧ: 1. ಶಾಸನಬದ್ಧ ಸಭೆ, 2.ಸಾಮಾನ್ಯ ಸಭೆ, ಅಥವಾ ವಾರ್ಷಿಕ ಸಾರ್ವತ್ರಿಕ ಸಭೆ, 3. ಅಸಾಧಾರಣ ಸಾರ್ವತ್ರಿಕ ಸಭೆ.

ಖಾಸಗಿ ಕಂಪನಿಯನ್ನು ಬಿಟ್ಟು ಉಳಿದ ಪ್ರತಿಯೊಂದು ಕಂಪನಿಯೂ ಶಾಸನಬದ್ಧ ಸಭೆಯನ್ನು (ಸ್ಟ್ಯಾಚ್ಯುಟರಿ ಮೀಟಿಂಗ್) ನಡೆಸಲೇಬೇಕು. ಕಂಪನಿ ವ್ಯವಹಾರ ಆರಂಭಿಸಲು ಅಧಿಕಾರಪತ್ರ ಪಡೆದ ದಿನದ ಒಂದು ತಿಂಗಳಿಗೆ ಮುಂಚೆಯಿಲ್ಲದಂತೆ, ಆರು ತಿಂಗಳಿಗೆ ಮೀರಿದಂತೆ, ಈ ನಡುವಿನ ಅವಧಿಯಲ್ಲಿ ಈ ಸಭೆಯನ್ನು ನಡೆಸಲೇಬೇಕೆಂಬುದು ಭಾರತದ ಕಂಪನಿಗಳ ಕಾಯಿದೆಯ 165ನೆಯ ವಿಧಿ. ಸಾಮಾನ್ಯವಾಗಿ ಇದೇ ಕಂಪನಿಯ ಸದಸ್ಯರ ಮೊದಲ ಸಭೆ. ಕಂಪನಿಯ ಸ್ಥಿತಿಗತಿಗಳನ್ನು ಸದಸ್ಯರಿಗೆ ತಿಳಿಸಿಕೊಡುವುದೇ ಈ ಸಭೆಯ ಮುಖ್ಯೋದ್ದೇಶ. ಈ ಸಭೆ ನಡೆಯಲು ಕನಿಷ್ಟಪಕ್ಷ ಇಪ್ಪತ್ತೊಂದು ದಿನಗಳ ಮುಂಚೆ, ಈ ಸಭೆಯ ತಿಳಿವಳಿಕೆ ಪತ್ರದೊಂದಿಗೆ ಕಂಪನಿಯ ಬಗೆಗೆ ಒಂದು ವರದಿಯನ್ನು ಎಲ್ಲ ಸದಸ್ಯರಿಗೂ ಕಳಿಸಿಕೊಡಬೇಕು. ಇದು ಶಾಸನಬದ್ಧ ವರದಿ (ಸ್ಟ್ಯಾಚ್ಯುಟರಿ ರಿಪೋರ್ಟ್). ಈ ವರದಿಯನ್ನು ತಯಾರಿಸುವುದು ಕಾಯದರ್ಶಿಯ ಕರ್ತವ್ಯ. ಇದು ಸರಿಯಾಗಿದೆಯೆಂದು ಕಡೆಯ ಪಕ್ಷ ಇಬ್ಬರು ನಿರ್ವಾಹಕರಾದರೂ ಸಹಿ ಹಾಕಬೇಕು. ಅಥವಾ ಕಂಪನಿಯ ಅಧ್ಯಕ್ಷರು ಸಹಿ ಹಾಕಬೇಕು. ಕಂಪನಿಯ ಲೆಕ್ಕಶೋಧಕರ ಸಹಿಯೂ ಇರಬೇಕು. ಕಂಪನಿಗಳ ರಿಜಿಸ್ಟ್ರಾರರಿಗೆ ಇದರ ಒಂದು ಪ್ರತಿಯನ್ನು ಸಲ್ಲಿಸಬೇಕು. ಸಾರ್ವಜನಿಕರಿಗೆ ಹಂಚಿಕೆಯಾದ ಷೇರುಗಳ ಸಂಪುರ್ಣ ವಿವರ, ಇವುಗಳಿಗಾಗಿ ಕಂಪನಿಗೆ ಬಂದ ಹಣ, ವರದಿಯ ತಾರೀಖಿಗೆ ಹಿಂದಿನ ಏಳು ದಿನಗಳವರೆಗೆ ಕಂಪನಿಗೆ ಬಂದ ಹಾಗೂ ಕಂಪನಿ ಪಾವತಿ ಮಾಡಿದ ನಗದು ಗೋಷ್ವಾರೆ (ಅಬ್ಸ್ಟ್ರ್ಯಾಕ್ಟ್‌), ಕಂಪನಿಯ ನಿರ್ವಾಹಕರು, ಲೆಕ್ಕ ಶೋಧಕರು, ಮ್ಯಾನೇಜಿಂಗ್ ಏಜೆಂಟರು, ಕಾರ್ಯದರ್ಶಿಗಳು, ಕೋಶಾಧ್ಯಕ್ಷರು, ವ್ಯವಸ್ಥಾಪಕರು, ಕಾರ್ಯದರ್ಶಿ-ಇವರ ಹೆಸರು, ವಿಳಾಸ ಹಾಗೂ ಉದ್ಯೋಗ, ಕಂಪನಿ ಮಾಡಿಕೊಂಡಿದ್ದ ಕರಾರುಗಳಲ್ಲಿ ಮಾಡಬೇಕಾಗಿ ಬಂದಿರುವ ಬದಲಾವಣೆಗಳ ವಿವರ, ಷೇರುಗಳ ಒಟ್ಟು ಕೊಳ್ಳಿಕೆ ಭರವಸೆ ಒಪ್ಪಂದದ ನಿರ್ವಹಣ, ಷೇರುಗಳ ಮೇಲೆ ಹಣಕೊಡಬೇಕೆಂದು ಕಂಪನಿ ಕಳುಹಿಸಿದ ಕರೆಪತ್ರದ (ಕಾಲ್ ನೋಟೀಸ್) ಬಾಬ್ತು ಕಂಪನಿಯ ನಿರ್ವಾಹಕರು, ಮ್ಯಾನೇಜಿಂಗ್ ಏಜೆಂಟರು, ವ್ಯವಸ್ಥಾಪಕರು ಇವರಿಂದ ಬರಬೇಕಾಗಿರುವ ಮೊಬಲಗಿನ ವಿವರ, ಷೇರುಗಳ ನೀಡಿಕೆಯ ಸಂಬಂಧವಾಗಿ ಕಂಪನಿಯ ನಿರ್ವಾಹಕರು, ಮ್ಯಾನೇಜಿಂಗ್ ಏಜೆಂಟರು, ಕಾರ್ಯದಶಿಗಳು, ಕೋಶಾಧ್ಯಕ್ಷರು ಅಥವಾ ವ್ಯವಸ್ಥಾಪಕರಿಗೆ ಕೊಟ್ಟ ಅಥವಾ ಕೊಡಬೇಕಾದ ಕಮಿಷನ್ ಅಥವಾ ದಲ್ಲಾಳಿಯ ವಿವರ, ಇವನ್ನೆಲ್ಲಾ ಈ ವರದಿ ಒಳಗೊಂಡಿರುತ್ತದೆ. ಕಂಪನಿಯ ಶಾಸನಬದ್ಧ ಸಭೆಯನ್ನು ನಡೆಸದೆ ಇದ್ದರೆ ಅಥವಾ ಶಾಸನಬದ್ಧ ವರದಿಯನ್ನು ಸಲ್ಲಿಸದೆ ಇದ್ದರೆ, ಕಂಪನಿಯ ಯಾವ ಸದಸ್ಯನಾದರೂ ಕಂಪನಿಯನ್ನು ಮುಚ್ಚಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯ ಕಂಪನಿಯನ್ನು ಮುಚ್ಚಲು ಆಜ್ಞೆ ಹೊರಡಿಸಬಹುದು. ಅಥವಾ ಸಭೆಯನ್ನು ನಡೆಸಿ ವರದಿಯನ್ನು ಸಲ್ಲಿಸಬೇಕೆಂದು ನಿರೂಪ ಹೊರಡಿಸಬಹುದು. ಸಂಬಂಧಪಟ್ಟ ನಿರ್ವಾಹಕರಿಗೂ ಅಧಿಕಾರಿಗಳಿಗೂ ಜುಲ್ಮಾನೆ ವಿಧಿಸಬಹುದು.

 ವಾರ್ಷಿಕ ಸಾರ್ವತ್ರಿಕ ಸಭೆ ಅಥವಾ ಸಾಮಾನ್ಯ ಸಭೆ 
ಇದು ಪ್ರತಿವರ್ಷವೂ ನಡೆಯಬೇಕು. ಮೊದಲನೆಯ ಸಭೆಯನ್ನು ಕಂಪನಿ ನೋಂದಣಿಯಾದ ದಿನದಿಂದ ಹದಿನೆಂಟು ತಿಂಗಳೊಳಗೆ ನಡೆಸಬೇಕು. ಆಮೇಲೆ ಪ್ರತಿಯೊಂದು ಸಭೆಯೂ ಹಿಂದಿನ ಸಭೆಯ ದಿನದಿಂದ ಹದಿನೈದು ತಿಂಗಳೊಳಗೆ ನಡೆಯಬೇಕು. ವಾರ್ಷಿಕ ಸಭೆಯ ಕಲಾಪಗಳನ್ನು ಕುರಿತು ಕಂಪನಿಯ ಸಂಘದ ಷರತ್ತುಗಳಲ್ಲಿ ನಿಬಂಧನೆಗಳಿರುತ್ತವೆ. ನಿರ್ವಾಹಕರ ಹಾಗೂ ಲೆಕ್ಕಶೋಧಕರ ವರದಿ, ಕಂಪನಿಯ ಲೆಕ್ಕ, ಆಸ್ತಿ-ಜವಾಬ್ದಾರಿ ಪಟ್ಟಿ, ಕಂಪನಿಯ ಲಾಭ ಹಂಚಿಕೆಯ ತೀರ್ಮಾನ, ಕಂಪನಿಯ ನಿರ್ವಾಹಕರ ಹಾಗೂ ಲೆಕ್ಕಶೋಧಕರ ಆಯ್ಕೆ, ಲೆಕ್ಕಶೋಧಕರ ಸಂಭಾವನೆಯ ಇತ್ಯರ್ಥ-ಮುಂತಾದ ಸಾಮಾನ್ಯ ಕಲಾಪಗಳು ಈ ಸಭೆಯಲ್ಲಿ ನಡೆಯುತ್ತವೆ, ಈ ಸಭೆಯ ನಡೆಯಲು ಗೊತ್ತಾದ ದಿನಕ್ಕೆ ಇಪ್ಪತ್ತೊಂದು ದಿನಗಳ ಮುಂಚಿತವಾಗಿ ಇದರ ತಿಳಿವಳಿಕೆ ಪತ್ರವನ್ನು ಸದಸ್ಯರಿಗೆ ಕಳಿಸಿಕೊಡಬೇಕು. ಕಂಪನಿಯ ಸದಸ್ಯರು ಸಭೆಯಲ್ಲಿ ಹಾಜರಿರಲು ಸಾಧ್ಯವಾಗದಿದ್ದರೆ ಅಂಥವರು ಇನ್ನೊಬ್ಬ ಸದಸ್ಯರಿಗೆ ಸಭೆಯಲ್ಲಿ ತಮ್ಮ ಪರವಾಗಿ ಮಾತನಾಡುವ ಅಧಿಕಾರವನ್ನು ಕೊಡುವ ಪ್ರತಿನಿಧಿ ಪತ್ರದ (ಲೆಟರ್ ಆಫ್ ಪ್ರಾಕ್ಸಿ) ನಮೂನೆಯನ್ನು ತಿಳಿವಳಿಕೆ ಪತ್ರದೊಂದಿಗೆ ಕಳುಹಿಸಿಕೊಡಬೇಕು. ಸಂಘದ ವಿಧಿಗಳಲ್ಲಿ ಈ ಅವಕಾಶ ಇದ್ದಲ್ಲಿ ಮಾತ್ರ ಇದನ್ನು ಕಳುಹಿಸಿಕೊಡಬೇಕು. 

ಕಂಪನಿಯ ನಿರ್ವಾಹಕರ ವರದಿಯನ್ನು ಅಧ್ಯಕ್ಷರೊಂದಿಗೆ ಸಮಾಲೋಚಿಸಿ ಕಾರ್ಯದರ್ಶಿ ತಯಾರಿಸುತ್ತಾನೆ. ಈ ವರದಿಯನ್ನು ನಿರ್ವಾಹಕ ಮಂಡಳಿ ಒಪ್ಪಬೇಕು. ಅನಂತರ ಇದಕ್ಕೆ ನಿರ್ವಾಹಕರೂ ಕಂಪನಿಯ ಅಧ್ಯಕ್ಷರೂ ಸಹಿ ಹಾಕುತ್ತಾರೆ. ಇದನ್ನೂ ಕಂಪನಿಯ ಲಾಭ ನಷ್ಟಗಳ ಲೆಕ್ಕ ಹಾಗೂ ಆಸ್ತಿ ಜವಾಬ್ದಾರಿ ತಃಖ್ತೆಯನ್ನೂ ಅಚ್ಚುಹಾಕಿಸಿ ಇವುಗಳ ಪ್ರತಿಗಳನ್ನು ಎಲ್ಲ ಸದಸ್ಯರಿಗೂ ಕಳುಹಿಸಿಕೊಡಬೇಕು.
ಲಾಭಾಂಶ ಹಂಚಿಕೆ : ಮೊದಲೇ ತಯಾರಿಸಿದ ಕಾರ್ಯಸೂಚಿಗೆ ಅನುಸಾರವಾಗಿ ಈ ಸಭೆಯಲ್ಲಿ ಕಲಾಪಗಳು ನಡೆಯುತ್ತವೆ. ಕಂಪನಿಯ ಕಳೆದ ವರ್ಷದ ಲಾಭದ ವಿನಿಯೋಗ ಹೇಗಾಗಬೇಕೆಂಬುದರ ವಿಚಾರವಾಗಿ ನಿರ್ವಾಹಕರು ಸೂಚಿಸಿರುವ ಶಿಫಾರಸಿನ ದೃಷ್ಟಿಯಲ್ಲಿ ತೀರ್ಮಾನ ಕೈಕೊಳ್ಳುವುದೂ ಈ ಸಭೆಯ ಮುಖ್ಯ ಕರ್ತವ್ಯಗಳಲ್ಲೊಂದು. ಕಳೆದ ವರ್ಷದ ನಿವ್ವಳ ಆದಾಯವನ್ನು ಯಾವ ರೀತಿ ವಿನಿಯೋಗ ಮಾಡಬೇಕೆಂಬುದನ್ನು ನಿರ್ವಾಹಕರು ಪರಿಶೀಲಿಸಿ ಆ ಬಗ್ಗೆ ಸೂಕ್ತ ಶಿಫಾರಸುಗಳನ್ನು ವಾರ್ಷಿಕ ಸಾಮಾನ್ಯ ಸಭೆಯ ಮುಂದೆ ಇಡುತ್ತಾರೆ. ಸಭೆಯ ಸದಸ್ಯರು ಚರ್ಚಿಸಿ ಇದನ್ನು ಒಪ್ಪುವರು; ಅಥವಾ ಬಿಡುವರು; ಇಲ್ಲವೇ ಸೂಕ್ತ ಮಾರ್ಪಾಟುಗಳನ್ನು ಮಾಡುವರು. ಕಂಪನಿಯ ಪಾವತಿಯಾದ ಷೇರುಗಳ ಮೇಲೆ ನಿಗದಿಯಾದ ಶೇಕಡ ದರದ ಲಾಭವನ್ನು ಲಾಭದ ಹಂಚಿಕೆಯಲ್ಲಿ ಮೊದಲಹಕ್ಕು ಇರಬಹುದಾದ ಷೇರುಗಳ ಮೇಲೆ ಮೊದಲು ಹಂಚಬೇಕು. ಉಳಿದದ್ದು ಸಾಮಾನ್ಯ ಹಕ್ಕುಗಳ ಷೇರುದಾರರಿಗೆ ಹಂಚಿಕೆಯಾಗಬಹುದು. ಈ ವಿಚಾರದಲ್ಲಿ ಕಂಪನಿಯ ನಿರ್ವಾಹಕರು ಮಾಡಿರುವ ಶಿಫಾರಿಸಿನ ದರಕ್ಕಿಂತ ಹೆಚ್ಚಿನ ದರದಲ್ಲಿ ಹಂಚಬೇಕೆಂದು ಹೇಳಲು ಷೇರುದಾರರಿಗೆ ಅಧಿಕಾರ ಇರುವುದಿಲ್ಲ. ಹೀಗೆ ಒಂದೊಂದು ಷೇರಿನ ಮೇಲೂ ನೀಡಿದ ಲಾಭದ ಅಂಶವೇ ಲಾಭಾಂಶ (ಡಿವಿಡೆಂಡ್).		ಈ ವಿಚಾರದಲ್ಲಿ ಕಂಪನಿಯ ಸಭೆಯಲ್ಲಿ ನಿರ್ಣಯವಾದ ಮೇಲೆ ಕಂಪನಿಯ ಕಾರ್ಯದರ್ಶಿ ಪ್ರತಿಯೊಬ್ಬ ಷೇರುದಾರನಿಗೂ ಎಷ್ಟು ಲಾಭಾಂಶ ಸಲ್ಲಬೇಕೆಂಬ ಪಟ್ಟಿಯನ್ನು ತಯಾರಿಸಿ ಅವರಿಗೆ ಅದನ್ನು ಹಂಚಲು ಸೂಕ್ತ ಏರ್ಪಾಟು ಕೈಕೊಳ್ಳುತ್ತಾನೆ.		

 ಅಸಾಧಾರಣ ಸಾರ್ವತ್ರಿಕ ಸಭೆ 
 ಎರಡು ವಾರ್ಷಿಕ ಸಾಮಾನ್ಯಸಭೆಗಳ ನಡುವೆ ನಡೆಯುವ ಸಭೆಯೇ ಅಸಾಧಾರಣ ಸಾರ್ವತ್ರಿಕ ಸಭೆ. ಇದನ್ನು ನಿರ್ವಾಹಕರೇ ಕರೆಯಬಹುದು. ಕಂಪನಿಯ ಷೇರುಬಂಡವಾಳದ ಹತ್ತನೆಯ ಒಂದು ಭಾಗಕ್ಕಿಂತ ಕಡಿಮೆಯಿಲ್ಲದಷ್ಟು ಮೊತ್ತದ ಬಂಡವಾಳವನ್ನು ಹೊಂದಿರುವ ಅಥವಾ ಕಂಪನಿಯ ಸದಸ್ಯರ ಒಟ್ಟು ಮತಾಧಿಕಾರದ ಹತ್ತನೆಯ ಒಂದು ಭಾಗಕ್ಕಿಂತ ಕಡಿಮೆಯಿಲ್ಲದಷ್ಟು ಅಧಿಕಾರ ಹೊಂದಿರುವ ಸಂಖ್ಯೆಯ ಸದಸ್ಯರು ಇಂಥ ಸಭೆಯನ್ನು ಕರೆಯಬೇಕೆಂದು ಇಚ್ಚಿಸಿ, ಅದಕ್ಕೆ ಕಾರಣವನ್ನೂ ಸೂಚಿಸಿ, ಕಂಪನಿಗೆ ಪತ್ರ ಬರೆದಾಗ ಈ ಸಭೆಯನ್ನು ಆ ಪತ್ರದ ತಾರೀಖಿನಿಂದ ಇಪ್ಪತ್ತೊಂದು ದಿನಗಳೊಳಗಾಗಿ ಕರೆಯಬೇಕು; ನಲವತ್ತೈದು ದಿನಗಳೊಳಗೆ ಈ ಸಭೆಯನ್ನು ನಡೆಸದಿದ್ದರೆ, ಆಗ ಇಚ್ಚಾಪತ್ರ ಸಲ್ಲಿಸಿದ ಸದಸ್ಯರೇ ಸಭೆಯನ್ನು ಕರೆದು ಕಲಾಪ ನಡೆಸಬಹುದು.

 ನಿರ್ಣಯಗಳು  
ಕಂಪನಿಯ ಸಭೆಯ ತೀರ್ಮಾನಗಳು ನಿರ್ಣಯಗಳ ರೂಪದಲ್ಲಿ ಆಗುತ್ತವೆ. ಸೂಚನೆಯ ಪರವಾಗಿಯೂ ವಿರೋಧವಾಗಿಯೂ ತಲಾ ಎಷ್ಟು ಮಂದಿ ಮತ ನೀಡುವರೆಂಬುದನ್ನು ಲೆಕ್ಕ ಹಾಕಿ, ಆ ಸೂಚನೆ ಸ್ವೀಕೃತವೇ ಅಸ್ವೀಕೃತವೇ ಎಂಬುದನ್ನು ಗಮನಿಸಿ ತೀರ್ಮಾನಿಸಬೇಕು. ಸೂಚನೆಗೆ ಹೆಚ್ಚು ಮತ ಬಂದಿದ್ದರೆ ಆಗ ಅದು ಸಾಮಾನ್ಯವಾಗಿ ಸ್ವೀಕೃತ. ಸ್ವೀಕೃತವಾದ ಸೂಚನೆಯೇ ನಿರ್ಣಯ.

ನಿರ್ಣಯಗಳು ಎರಡು ವಿಧ : ಸಾಮಾನ್ಯ ನಿರ್ಣಯಕ್ಕೆ ಸಾಮಾನ್ಯ ಬಹುಮತ ಇದ್ದರೆ ಸಾಕು. ನಿರ್ವಾಹಕರ ವರದಿಯ ಸ್ವೀಕಾರ, ವಾರ್ಷಿಕ ಲೆಕ್ಕಗಳ ಒಪ್ಪಿಗೆ. ಲೆಕ್ಕ ಶೋಧಕರ ನೇಮಕ ನಿರ್ವಾಹಕರ ಆಯ್ಕೆ ಮುಂತಾದವಕ್ಕೆ ಸಾಮಾನ್ಯ ಬಹುಮತ ಸಾಕು. ಕಂಪನಿಯ ನಿಬಂಧನೆಗಳ ತಿದ್ದುಪಡಿಯೇ ಮುಂತಾದ ಮುಖ್ಯ ವಿಚಾರಗಳ ತೀರ್ಮಾನಕ್ಕೆ ವಿಶೇಷ ನಿರ್ಣಯವೇ ಆಗಬೇಕು. ಇಂಥ ನಿರ್ಣಯದ ಸೂಚನೆಯನ್ನು ಸದಸ್ಯರಿಗೆ ಕನಿಷ್ಠ ಪಕ್ಷ ಇಪ್ಪತ್ತೆÆಂದು ದಿನಗಳ ಮುಂಚೆ ಕಳಿಸಬೇಕು. ಕೊಟ್ಟ ಮತದಲ್ಲಿ ಮುಕ್ಕಾಲು ಸಂಖ್ಯೆ ಮತ ಈ ನಿರ್ಣಯದ ಪರವಾಗಿ ಬರಬೇಕು.
ಡಿಬೆಂಚರ್ ಅಥವಾ ಸಾಲಪತ್ರ : ಕಂಪನಿಗೆ ಷೇರುಗಳ ಮೂಲಕ ಪಡೆದ ಬಂಡವಾಳಕ್ಕಿಂತ ಹೆಚ್ಚಿನ ಬಂಡವಾಳ ಬೇಕಿದ್ದರೆ ಅದನ್ನು ಡಿಬೆಂಚರ್ ಅಥವಾ ಸಾಲಪತ್ರಗಳ ಮೂಲಕ ಪಡೆಯಬಹುದು. ಡಿಬೆಂಚರುಗಳನ್ನೂ ಷೇರುಗಳ ಹಾಗೆಯೇ ಸಾರ್ವಜನಿಕರಿಗೆ ನೀಡಲಾಗುತ್ತದೆ. ಆದರೆ ಒಂದು ಮುಖ್ಯ ವ್ಯತ್ಯಾಸ ಷೇರುದಾರರು ಕಂಪನಿಯ ಒಡೆಯರು, ಡಿಬೆಂಚರುದಾರರು ಸಾಲಗಾರರು, ಕಂಪನಿ ಲಾಭ ಸಂಪಾದನೆ ಮಾಡಿದಾಗ ಷೇರುಗಳ ಮೇಲೆ ಲಾಭದ ಹಂಚಿಕೆಯಾಗುತ್ತದೆ. ಕಂಪನಿ ಲಾಭ ಗಳಿಸಲಿ ಬಿಡಲಿ, ಗೊತ್ತಾದ ದರದಲ್ಲಿ ಡಿಬೆಂಚರುಗಳ ಮೇಲೆ ಬಡ್ಡಿ ಸಲ್ಲಿಸಲೇ ಬೇಕು. ಷೇರುಗಳ ಹಣವನ್ನು ಸಾಮಾನ್ಯವಾಗಿ ಹಿಂತಿರುಗಿಸುವುದಿಲ್ಲ. ಆದರೆ ಡಿಬೆಂಚರಿನ ಹಣವನ್ನು ಕ್ಲುಪ್ತವಾದ ಅವಧಿಯ ಪುರೈಕೆಯಾದಾಗ ಹಿಂತಿರುಗಿಸಬೇಕು. ಈ ನಡುವೆ ಕಂಪನಿಯನ್ನು ಮುಚ್ಚಿದರೆ ಡಿಬೆಂಚರಿನ ಹಣವನ್ನು ಕೊಟ್ಟಮೇಲೆಯೇ ಷೇರುದಾರರಿಗೆ ಮಿಕ್ಕ ಹಣದ ವಿನಿಯೋಗ.

ಡಿಬೆಂಚರುಗಳಲ್ಲಿ ನಾನಾ ವಿಧ, ಕಂಪನಿ ಸ್ವತ್ತಿನ ಆಧಾರ ಪಡೆದ ಡಿಬೆಂಚರುಗಳು, ಆಧಾರವಿಲ್ಲದ ಡಿಬೆಂಚರುಗಳು, ಕಂಪನಿಯ ಪುಸ್ತಕದಲ್ಲಿ ದಾಖಲಾಗದ ಡಿಬೆಂಚರುಗಳು, ದಾಖಲಾದ ಡಿಬೆಂಚರುಗಳು ಇತ್ಯಾದಿ, ಕಂಪನಿಯ ಪುಸ್ತಕದಲ್ಲಿ ಡಿಬೆಂಚರುದಾರರ ಹೆಸರು ದಾಖಲಾಗದಿದ್ದ ಪಕ್ಷದಲ್ಲಿ ಅಂಥ ಡಿಬೆಂಚರುಗಳನ್ನು ಒಬ್ಬರು ಇನ್ನೊಬ್ಬರಿಗೆ ಬಲು ಸುಲಭವಾಗಿ ವರ್ಗಾಯಿಸಬಹುದು. ಕಂಪನಿಯ ಪುಸ್ತಕದಲ್ಲಿ ದಾಖಲಾಗಿದ್ದ ಪಕ್ಷದಲ್ಲಿ ಅಂಥವನ್ನು ವರ್ಗಾಯಿಸಬೇಕಾದರೆ ಡಿಬೆಂಚರುದಾರರು ಕಂಪನಿಗೆ ಬರೆದು ಹೆಸರು ಬದಲಾವಣೆ ಮಾಡಿಸಬೇಕು, ಆಧಾರ ಹೊಂದಿ ಡಿಬೆಂಚರುಗಳ ಒಡೆಯರಿಗೆ ಕಂಪನಿ ಆಧಾರವಾಗಿ ನೀಡಿದ ಸ್ವತ್ತುಗಳ ಮೇಲೆ ಹಕ್ಕುಂಟು. ಕಂಪನಿಯನ್ನು ಮುಚ್ಚಿದ ಸಂದರ್ಭದಲ್ಲಿ ಆ ಸ್ವತ್ತುಗಳನ್ನು ಮಾರಿ ಬಂದ ಹಣದಲ್ಲಿ ಈ ಡಿಬೆಂಚರುದಾರರಿಗೆ ಮೊದಲು ಹಣ ಸಲ್ಲಬೇಕು. ಆಧಾರರಹಿತ ಡಿಬೆಂಚರುಗಳ ಒಡೆಯರು ಕಂಪನಿಯ ಸಾಮಾನ್ಯ ಸಾಲಿಗರು. ಅವರಿಗೆ ಯಾವ ಒಂದು ಸ್ವತ್ತಿನ ಮೇಲೂ ವಿಶಿಷ್ಟವಾದ ಅಧಿಕಾರ ಇರುವುದಿಲ್ಲ.

ಕಂಪನಿಯ ಅವಸಾಯನ (ಲಿಕ್ವಿಡೇಷನ್) ಅಥವಾ ದಿವಾಳಿತನ (ಬ್ಯಾಂಕ್ರಪ್ಟ್ಸಿ) : ಕಂಪನಿಯ ಕಲಾಪಗಳನ್ನು ಮುಗಿಸಿ, ಅದರ ವ್ಯವಹಾರಗಳನ್ನು ಕೊನೆಗೊಳಿಸಿ, ಅದನ್ನು ಮುಚ್ಚುವುದೇ ಕಂಪನಿಯ ಅವಸಾಯನ ಅಥವಾ ಅಂತ್ಯ. ಕಂಪನಿಯ ಅಂತ್ಯವಾದಾಗ ಅದು ದಿವಾಳಿಯಾಯಿತೆಂದು ಯಾವಾಗಲೂ ಅರ್ಥವಲ್ಲ. ಕಂಪನಿ ತನ್ನ ಆಸ್ತಿಯಿಂದ ತನ್ನ ಸಾಲವೆಲ್ಲವನ್ನೂ ತೀರಿಸಲು ಅಸಮರ್ಥವಾದ ಸಂದರ್ಭದಲ್ಲಿ ಮಾತ್ರವೇ ದಿವಾಳಿ ಆಗುತ್ತದೆ. ಅದು ಕಡ್ಡಾಯ ಪುರ್ವಕ ಅವಸಾಯನ. ಇದೇ ಅಲ್ಲದೆ ಇನ್ನೆರಡು ರೀತಿಯಲ್ಲಿ ಕಂಪನಿಯ ಅವಸಾಯನ ಆಗಬಹುದು; ಸ್ವಇಚ್ಛೆಯಿಂದ ಆದ ಅವಸಾಯನ ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಆದ ಅವಸಾಯನ.

ಕಡ್ಡಾಯಪುರ್ವಕ (ಕಂಪಲ್ಸರಿ) ಅವಸಾಯನವೆಂದರೆ ನ್ಯಾಯಾಲಯದಿಂದ ಜಾರಿಗೆ ತರಲಾದ ಅಂತ್ಯ. ಸದಸ್ಯರು ನ್ಯಾಯಾಲಯದಿಂದಲೇ ಕಂಪನಿಯ ಅಂತ್ಯವಾಗಬೇಕೆಂದು ವಿಶೇಷನಿರ್ಣಯ ಮಾಡಿದಾಗಲೋ, ಕಾನೂನುಬದ್ಧವಾದ ಸದಸ್ಯಸಭೆಯನ್ನು ಕಂಪನಿ ಏರ್ಪಡಿಸಿದಾಗಲೋ ಕಂಪನಿಯ ರಿಜಿಸ್ಟರಾದ ಒಂದು ವರ್ಷದೊಳಗೆ ಅದು ವ್ಯವಹಾರವನ್ನು ಆರಂಭಿಸದೆ ಹೋದಾಗಲೋ ಕಂಪನಿಯ ಸದಸ್ಯರ ಸಂಖ್ಯೆ ಕನಿಷ್ಠ ಮಿತಿಗಿಂತ ಕಡಿಮೆಯಾದಾಗಲೋ ಕಂಪನಿಯ ಸಾಲವನ್ನು ತೀರಿಸುವುದು ಅಸಾಧ್ಯವಾದಾಗಲೋ ನ್ಯಾಯಾಲಯವೇ ಕಂಪನಿಯನ್ನು ಅಂತ್ಯಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಾಗಲೋ ಈ ಬಗೆಯ ಅಂತ್ಯವಾಗುತ್ತದೆ.

ಈ ಸಂದರ್ಭದಲ್ಲಿ ನ್ಯಾಯಾಲಯ ಒಬ್ಬ ಅಧಿಕೃತ ಅವಸಾಯಕನನ್ನು (ಅಫಿಷಿಯಲ್ ಲಿಕ್ವಿಡೇಟರ್) ನೇಮಿಸುತ್ತದೆ, ಈತ ಕಂಪನಿಯ ಆಸ್ತಿಯನ್ನು ಮಾರಿ ನಗದು ಹಣ ಪಡೆದು ಕಂಪನಿಗೆ ಬರಬೇಕಾದ ಹಣವನ್ನೆಲ್ಲ ವಸೂಲುಮಾಡಿ, ಆ ಹಣದಿಂದ ಸಾಲಗಳನ್ನೆಲ್ಲ ತೀರಿಸಿ, ಹಣವೇನಾದರೂ ಉಳಿದಿದ್ದರೆ ಅದನ್ನು ಷೇರುದಾರರಲ್ಲಿ ಅವರ ಹಕ್ಕಿಗೆ ಅನುಸಾರವಾಗಿ ಹಂಚುತ್ತಾನೆ.

ಕಂಪನಿಯ ಅವಧಿ ಮುಗಿದರೆ ಅಥವಾ ಕಂಪನಿಯ ಷೇರುದಾರರು ಕಂಪನಿಯನ್ನು ಮುಚ್ಚಲು ವಿಶೇಷ ಏರ್ಪಾಡು ಮಾಡಿದರೆ ಆಗ ಅದು ಕಂಪನಿಯ ಸ್ವಇಚ್ಛೆಯ ಅಂತ್ಯವಾಗುತ್ತದೆ. ಕಂಪನಿಯೇ ಆಗ ಲೇಣೆದೇಣೆಗಳ ವ್ಯವಸ್ಥಾಪಕನೊಬ್ಬನನ್ನು ನೇಮಿಸುತ್ತದೆ.		ಕಂಪನಿಯನ್ನು ಮುಚ್ಚಬೇಕೆಂದು ಷೇರುದಾರರು ನಿರ್ಣಯ ಮಾಡಿದ ಮೇಲೆ ಕಂಪನಿಯ ಯಾವ ಷೇರುದಾರನಾಗಲಿ, ಡಿಬೆಂಚರುದಾರನಾಗಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಕಂಪನಿಯ ಅವಸಾಯಕ ಆಗಬೇಕೆಂದು ಕೇಳಿಕೊಂಡಲ್ಲಿ ಅಂಥ ಸಂದರ್ಭದಲ್ಲಿ ನ್ಯಾಯಾಲಯ ಮೇಲ್ವಿಚಾರಣೆ ನಡೆಸುತ್ತದೆ.

ಕಂಪನಿಯ ಅಂತ್ಯವಾದ ಮೇಲೆ ಅದರ ಹೆಸರಿನಲ್ಲಿ ಯಾವ ಬಗೆಯ ವ್ಯವಹಾರವೂ ನಡೆಯುವುದಿಲ್ಲ. ಕಂಪನಿಯನ್ನು ಅಂತ್ಯಗೊಳಿಸುವ ಕ್ರಮ ಕೈಕೊಂಡ ಕಾಲದಲ್ಲಿ ಆ ಕಂಪನಿಯ ಹೆಸರಿನಲ್ಲಿ ವ್ಯವಹಾರ ನಡೆಸುವ ಕರಾರು ಮಾಡಿಕೊಳ್ಳುವ ಎಲ್ಲ ಹಕ್ಕುಗಳೂ ಕಂಪನಿಯ ನಿರ್ವಾಹಕರಿಂದ ತಪ್ಪಿ ಅವಸಾಯಕನಲ್ಲಿ ನಿಹಿತವಾಗುತ್ತದೆ. (ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ